ಮಧ್ಯಪ್ರಾಚ್ಯದಲ್ಲಿ ಇರಾನ್ ಮತ್ತು ಇಸ್ರೇಲ್ ನಡುವೆ ನಡೆಯುತ್ತಿರುವ ಭೀಕರ ಸಂಘರ್ಷದ ಕುರಿತು ಜಾಗತಿಕ ಮಟ್ಟದಲ್ಲಿ ದೊಡ್ಡಣ್ಣ ಎನಿಸಿಕೊಂಡಿರುವ ಚೀನಾ ಕೊನೆಗೂ ತನ್ನ ಮೌನ ಮುರಿದಿದೆ. ಇರಾನ್ ಹಾಗೂ ಇಸ್ರೇಲ್ ನಡುವಿನ ಯುದ್ಧದ ಜ್ವಾಲೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಇದು ಇಡೀ ವಿಶ್ವಕ್ಕೆ ಹರಡುವ ಮುನ್ನ ತಕ್ಷಣವೇ ಸೇನಾ ಕಾರ್ಯಾಚರಣೆಗಳನ್ನು ನಿಲ್ಲಿಸಬೇಕು ಎಂದು ಚೀನಾ ಖಡಕ್ ಎಚ್ಚರಿಕೆ ನೀಡಿದೆ. ಅಮೆರಿಕ, ಇರಾನ್ ಮತ್ತು ಇಸ್ರೇಲ್ ಮೂರೂ ದೇಶಗಳಿಗೆ ಎಚ್ಚರಿಕೆ ರವಾನಿಸಿರುವ ಚೀನಾ, ಪರಿಸ್ಥಿತಿ ಮತ್ತಷ್ಟು ಹದಗೆಡದಂತೆ ಮಾತುಕತೆಯ ಹಾದಿಯನ್ನು ಅನುಸರಿಸಲು ತಾಕೀತು ಮಾಡಿದೆ. ಸದ್ಯದ ಉದ್ವಿಗ್ನತೆಯು ಕೇವಲ ಒಂದು ಭಾಗಕ್ಕೆ ಸೀಮಿತವಾಗದೆ ಇತರ ದೇಶಗಳಿಗೆ ಹರಡುವುದನ್ನು ತಡೆಯುವುದೇ ತಮ್ಮ ಮೊದಲ ಆದ್ಯತೆಯಾಗಿದೆ ಎಂದು ಚೀನಾ ಸರ್ಕಾರ ಸ್ಪಷ್ಟಪಡಿಸಿದೆ.
ಚೀನಾ ಇಷ್ಟೊಂದು ಗಂಭೀರವಾಗಿ ಪ್ರತಿಕ್ರಿಯಿಸಲು ಟೆಹ್ರಾನ್‌ನಲ್ಲಿ ನಡೆದ ಭೀಕರ ಕ್ಷಿಪಣಿ ದಾಳಿಯು ಪ್ರಮುಖ ಕಾರಣವಾಗಿದೆ. ಇರಾನ್ ರಾಜಧಾನಿ ಟೆಹ್ರಾನ್‌ನಲ್ಲಿ ನಡೆದ ಸ್ಫೋಟದಲ್ಲಿ ಚೀನಾದ ಒಬ್ಬ ಪ್ರಜೆ ಸಾವನ್ನಪ್ಪಿದ್ದು, ಈ ಘಟನೆಯನ್ನು ಚೀನಾ ಅತ್ಯಂತ ಗಂಭೀರವಾಗಿ ಪರಿಗಣಿಸಿದೆ. ತನ್ನ ದೇಶದ ಪ್ರಜೆ ವಿದೇಶಿ ನೆಲದಲ್ಲಿ ಯುದ್ಧಕ್ಕೆ ಬಲಿಯಾಗಿರುವುದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಚೀನಾದ ವಿದೇಶಾಂಗ ಇಲಾಖೆ ವಕ್ತಾರೆ ಮಾವೋ ನಿಂಗ್, ಯುದ್ಧ ನಿಲ್ಲಿಸಿ ಶಾಂತಿ ಕಾಪಾಡುವಂತೆ ಎಲ್ಲಾ ದೇಶಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಯುದ್ಧದ ಅಬ್ಬರದಲ್ಲಿ ಸಾಮಾನ್ಯ ನಾಗರಿಕರು ಬಲಿಯಾಗುತ್ತಿರುವುದು ಸಹಿಸಲು ಅಸಾಧ್ಯ ಎಂದುಕಿಡಿಕಾರಿದ್ದಾರೆ.
ಯುದ್ಧ ಪೀಡಿತ ಪ್ರದೇಶದಲ್ಲಿ ಮೃತಪಟ್ಟ ಚೀನಾ ಪ್ರಜೆಯ ಕುಟುಂಬಕ್ಕೆ ಅಗತ್ಯವಿರುವ ಎಲ್ಲಾ ರೀತಿಯ ಕಾನೂನು ಹಾಗೂ ಆರ್ಥಿಕ ನೆರವು ನೀಡಲು ಚೀನಾ ಸರ್ಕಾರ ಮುಂದಾಗಿದೆ. ಈ ನಿಟ್ಟಿನಲ್ಲಿ ಇರಾನ್‌ನಲ್ಲಿರುವ ಚೀನಾದ ರಾಯಭಾರ ಕಚೇರಿಗೆ ವಿಶೇಷ ಸೂಚನೆಗಳನ್ನು ನೀಡಲಾಗಿದ್ದು, ಮೃತರ ಕುಟುಂಬದ ಜೊತೆ ನಿರಂತರ ಸಂಪರ್ಕದಲ್ಲಿರುವಂತೆ ಆದೇಶಿಸಲಾಗಿದೆ. ಇರಾನ್ ಮತ್ತು ಇಸ್ರೇಲ್ ನಡುವಿನ ಈ ಸಮರವು ಜಾಗತಿಕ ಆರ್ಥಿಕತೆ ಮತ್ತು ಭದ್ರತೆಯ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದ್ದು, ಕೂಡಲೇ ಶಸ್ತ್ರಾಸ್ತ್ರ ಕೆಳಗಿಳಿಸಿ ಸಂಧಾನದ ಮೇಜಿನ ಬಳಿ ಕುಳಿತುಕೊಳ್ಳದಿದ್ದರೆ ಪರಿಸ್ಥಿತಿ ವಿಕೋಪಕ್ಕೆ ಹೋಗಲಿದೆ ಎಂದು ಚೀನಾ ಎಚ್ಚರಿಸಿದೆ.


