
ಕನ್ನಡ ಕಿರುತೆರೆಯ ಜನಪ್ರಿಯ ನಟಿ ಮತ್ತು ನಿರೂಪಕಿ ಅನುಪಮಾ ಗೌಡ ಅವರು ಕಳೆದ ಕೆಲ ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದ ತಮ್ಮ ನಿಶ್ಚಿತಾರ್ಥದ ಸುದ್ದಿಗೆ ಅಂತಿಮವಾಗಿ ತೆರೆ ಎಳೆದಿದ್ದಾರೆ. ತಮ್ಮ ಆಪ್ತ ಗೆಳೆಯ ರಾಘವ್ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎಂಬ ಸುದ್ದಿಯನ್ನು ಅವರು ಸ್ಪಷ್ಟವಾಗಿ ನಿರಾಕರಿಸಿದ್ದಾರೆ.
ಇತ್ತೀಚೆಗೆ ಅನುಪಮಾ ಗೌಡ ಅವರು ತಮ್ಮ ಆತ್ಮೀಯ ಗೆಳೆಯ ರಾಘವ್ ಅವರೊಂದಿಗೆ ಇರುವ ಫೋಟೋಗಳನ್ನು ಹಂಚಿಕೊಂಡಿದ್ದರು. ಇದನ್ನು ನೋಡಿದ ನೆಟ್ಟಿಗರು ಮತ್ತು ಕೆಲವು ಮಾಧ್ಯಮಗಳು “ಅನುಪಮಾ ಗೌಡ ಅವರು ಸದ್ದಿಲ್ಲದೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ” ಎಂದು ಸುಳ್ಳು ಸುದ್ದಿ ಹಬ್ಬಿಸಿದ್ದವು.
ಅನುಪಮಾ ನೀಡಿದ ಸ್ಪಷ್ಟನೆ:
ಈ ವದಂತಿಗಳ ಬಗ್ಗೆ ಹಾಸ್ಯಮಿಶ್ರಿತ ಧಾಟಿಯಲ್ಲಿ ಪ್ರತಿಕ್ರಿಯಿಸಿರುವ ಅನುಪಮಾ, “ನನ್ನ ನಿಶ್ಚಿತಾರ್ಥ ನಡೆದಿದೆ ಎಂದು ಎಲ್ಲರೂ ಹೇಳುತ್ತಿದ್ದಾರೆ. ಆದರೆ ಆ ನಿಶ್ಚಿತಾರ್ಥಕ್ಕೆ ಹೋಗಲು ನನಗೇ ಸಾಧ್ಯವಾಗಿಲ್ಲ! ನನಗ್ಯಾರೂ ಅದರ ಬಗ್ಗೆ ಮಾಹಿತಿಯೇ ಕೊಟ್ಟಿರಲಿಲ್ಲ” ಎಂದು ವ್ಯಂಗ್ಯವಾಗಿ ಉತ್ತರಿಸುವ ಮೂಲಕ ಸುದ್ದಿಯನ್ನು ಅಲ್ಲಗಳೆದಿದ್ದಾರೆ.
‘ಒಂದು ಸೀಕ್ರೆಟ್ ಶೇರ್ ಮಾಡಬೇಕಿತ್ತು. ನಾನು ಸಾಮಾನ್ಯವಾಗಿ ಯಾವುದಕ್ಕೂ ರಿಯಾಕ್ಟ್ ಮಾಡಲ್ಲ. ಆದರೆ, ಶೂಟ್ಗೆ ಬಂದಾಗ ಎಲ್ಲರೂ ಕಂಗ್ರಾಜ್ಯುಲೇಷನ್ ಎಂದರು. ಮೆಸೇಜ್ ಕೂಡ ಬರುತ್ತಿತ್ತು. ನನ್ನ ಬೆಸ್ಟ್ ಫ್ರೆಂಡ್ ರಾಘವ್ ಜೊತೆ ಎಂಗೇಜ್ಮೆಂಟ್ ಆಯ್ತು. ಆದರೆ ಎಂಗೇಜ್ಮೆಂಟ್ಗೆ ಪಾಲ್ಗೊಳ್ಳಲು ನಮಗೆ ಸಾಧ್ಯವಾಗಿಲ್ಲ. ನಮಗೆ ಯಾರೂ ಮಾಹಿತಿಯೇ ನೀಡಿರಲಿಲ್ಲ. ಒಂದಷ್ಟು ಪೇಜ್ನವರು ಈ ರೀತಿ ಸುದ್ದಿ ಹಬ್ಬಿಸುತ್ತಿದ್ದಾರೆ’ ಎಂದು ವ್ಯಂಗವಾಗಿ ಅನುಪಮಾ ಮಾತನಾಡಿದ್ದಾರೆ.
‘ಮುಂದಿನ ಬಾರಿ ಒಳ್ಳೆಯ ಇಮೇಜ್ ಕ್ರಿಯೇಟ್ ಮಾಡಿ. ಉಂಗುರು ಹಾಕುವ ರೀತಿಯ ಫೋಟೋ ಸೃಷ್ಟಿ ಮಾಡಿ. ಈಗ ಹೇಗಿದ್ದರೂ ಎಐ ಬಂದಿದೆ. ಆಗ ಇನ್ನೂ ಖುಷಿ ಆಗುತ್ತದೆ. ಇನ್ನೂ ಟೈಮ್ ಇದೆ. ಮದುವೆನ ಈಗಲೇ ಮಾಡಿಸೋಕೆ ಹೋಗಬೇಡಿ. ಎರಡು ತಿಂಗಳು ಬಿಟ್ಟು ಮಾಡಿ. ಆಗ ಜನರು ನೋಡ್ತಾರೆ. ಟ್ರೆಡಿಷಿನಲ್ ಔಟ್ಫಿಟ್ ಹಾಕಿ. ನನ್ನ ರಾಘವ್ ಅವರನ್ನು ಮದುವೆಗೆ ಕರೆಯಿರಿ’ ಎಂದು ಅನುಪಮಾ ಹೇಳಿದ್ದಾರೆ.




