ಜಿಲ್ಲೆವೈರಲ್ ನ್ಯೂಸ್ಸುದ್ದಿ

ಎಲ್ಲೆಂದರಲ್ಲಿ ಬೀದಿ ನಾಯಿಗಳಿಗೆ ಆಹಾರ ಹಾಕಿದರೆ ಬೀಳುತ್ತೆ ದಂಡ..!

ಗ್ರೇಟರ್ ಬೆಂಗಳೂರು ಪ್ರಾಧಿಕಾರವು ಸಿಲಿಕಾನ್ ಸಿಟಿಯಲ್ಲಿ ಬೀದಿ ನಾಯಿಗಳ ಹಾವಳಿ ಮತ್ತು ಸಾರ್ವಜನಿಕರ ನಡುವಿನ ಸಂಘರ್ಷಕ್ಕೆ ಮುಕ್ತಿ ಹಾಡಲು ಹೊಸ ನಿಯಮಗಳನ್ನು ಜಾರಿಗೆ ತಂದಿದೆ. ಇನ್ಮುಂದೆ ಶ್ವಾನಪ್ರಿಯರು ರಸ್ತೆ ಬದಿ ಅಥವಾ ಪಾದಚಾರಿ ಮಾರ್ಗಗಳಲ್ಲಿ ಎಲ್ಲೆಂದರಲ್ಲಿ ಬೀದಿ ನಾಯಿಗಳಿಗೆ ಆಹಾರ ನೀಡುವಂತಿಲ್ಲ. ಈ ನಿಯಮವನ್ನು ಉಲ್ಲಂಘಿಸಿ ಸಾರ್ವಜನಿಕರಿಗೆ ತೊಂದರೆಯಾಗುವಂತೆ ಆಹಾರ ಹಾಕಿದರೆ ದಂಡ ತೆರಬೇಕಾಗುತ್ತದೆ ಎಂದು ಅಧಿಕಾರಿಗಳು ಎಚ್ಚರಿಸಿದ್ದಾರೆ.

ನಗರದಾದ್ಯಂತ ಬೀದಿ ನಾಯಿಗಳಿಗೆ ಆಹಾರ ನೀಡಲೆಂದೇ ಜಿಬಿಎ ಸುಮಾರು 450 ಅಧಿಕೃತ ‘ಫೀಡಿಂಗ್ ಸೆಂಟರ್’ಗಳನ್ನು ಗುರುತಿಸಿದೆ. ಬೆಂಗಳೂರು ಪೂರ್ವ ವಲಯದಲ್ಲಿ ಅತಿ ಹೆಚ್ಚು ಅಂದರೆ 150 ಕೇಂದ್ರಗಳಿದ್ದರೆ, ಕೇಂದ್ರ ವಲಯದಲ್ಲಿ 90, ಪಶ್ಚಿಮದಲ್ಲಿ 85, ಉತ್ತರದಲ್ಲಿ 70 ಮತ್ತು ದಕ್ಷಿಣ ವಲಯದಲ್ಲಿ 55 ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಈ ನಿಗದಿತ ಸ್ಥಳಗಳನ್ನು ಹೊರತುಪಡಿಸಿ ಬೇರೆಲ್ಲೂ ಆಹಾರ ನೀಡದಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.

ನಾಯಿಗಳು ಆಹಾರ ಸಿಗುವ ಜಾಗವನ್ನು ತಮ್ಮ ‘ಪ್ರಾದೇಶಿಕ ವ್ಯಾಪ್ತಿ’ ಎಂದು ಭಾವಿಸಿ ಅಲ್ಲಿಗೆ ಬರುವ ಅಪರಿಚಿತರ ಮೇಲೆ ದಾಳಿ ಮಾಡುವ ಸಾಧ್ಯತೆ ಹೆಚ್ಚಿರುತ್ತದೆ. ಇದನ್ನು ತಡೆಯಲು ಮತ್ತು ರಸ್ತೆ ಬದಿ ಆಹಾರ ಹಾಕುವುದರಿಂದ ವಾಹನ ಸವಾರರಿಗೆ ಉಂಟಾಗುವ ತೊಂದರೆಯನ್ನು ತಪ್ಪಿಸಲು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಈ ಮೂಲಕ ಶ್ವಾನಪ್ರಿಯರು ಮತ್ತು ಸಾರ್ವಜನಿಕರ ನಡುವೆ ನಿತ್ಯ ನಡೆಯುವ ಜಗಳಕ್ಕೆ ಬ್ರೇಕ್ ಹಾಕುವ ಗುರಿ ಹೊಂದಲಾಗಿದೆ.

ಈ ಅಧಿಕೃತ ಕೇಂದ್ರಗಳಲ್ಲಿ ಆಹಾರ ನೀಡುವವರಿಗೆ ಜಿಬಿಎ ಕೆಲವು ಷರತ್ತುಗಳನ್ನು ವಿಧಿಸಿದೆ. ಆಹಾರ ನೀಡುವ ಸ್ಥಳಗಳಲ್ಲಿ ‘ಆಹಾರ ಕೇಂದ್ರ’ ಎಂಬ ಫಲಕವಿರಲಿದ್ದು, ಆ ಜಾಗವನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ಕಡ್ಡಾಯವಾಗಿದೆ. ಅಲ್ಲದೆ ಜನದಟ್ಟಣೆ ಕಡಿಮೆ ಇರುವ ಸಮಯದಲ್ಲಿ ಮಾತ್ರ ಆಹಾರ ನೀಡಬೇಕು ಎಂದು ಸೂಚಿಸಲಾಗಿದೆ. ಇನ್ಮುಂದೆ ಬೆಂಗಳೂರಿಗರು ನಾಯಿಗಳಿಗೆ ಬಿಸ್ಕೆಟ್ ಹಾಕುವ ಮುನ್ನ ಅದು ಅಧಿಕೃತ ಫೀಡಿಂಗ್ ಝೋನ್ ಹೌದೋ ಅಲ್ಲವೋ ಎಂಬುದನ್ನು ಖಚಿತಪಡಿಸಿಕೊಳ್ಳುವುದು ಅನಿವಾರ್ಯವಾಗಿದೆ.

Comments (0)

Your email address will not be published. Required fields are marked *

Back to top button