ಕ್ರೈಂ ಸ್ಟೋರಿಜಿಲ್ಲೆಸುದ್ದಿ

ಶೀಲ ಶಂಕಿಸಿ ಹೆಂಡತಿಯನ್ನು ಮಚ್ಚಿನಿಂದ ಕೊಚ್ಚಿ ಕೊಂದ ಗಂಡ!

ಬೆಂಗಳೂರು: ಗೋವಿಂದರಾಜನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬೆಚ್ಚಿಬೀಳಿಸುವ ಘಟನೆಯೊಂದು ನಡೆದಿದ್ದು, ಪತಿಯೊಬ್ಬ ತನ್ನ ಪತ್ನಿಯ ಶೀಲ ಶಂಕಿಸಿ ಮಚ್ಚಿನಿಂದ ಕೊಚ್ಚಿ ಕೊಲೆಗೈದಿದ್ದಾನೆ. 55 ವರ್ಷದ ದೇವಿಕಾ ಕೊಲೆಯಾದ ಮಹಿಳೆ ಎಂದು ಗುರುತಿಸಲಾಗಿದೆ. 65 ವರ್ಷದ ಪತಿ ಕುಮಾರ್, ಪತ್ನಿ ಮಲಗಿದ್ದ ವೇಳೆ ಮಧ್ಯರಾತ್ರಿ ಸುಮಾರು 12:45ರ ಸುಮಾರಿಗೆ ಈ ಭೀಕರ ಕೃತ್ಯವೆಸಗಿದ್ದಾನೆ. ಇಷ್ಟು ವರ್ಷ ಸಂಸಾರ ನಡೆಸಿದ ದಂಪತಿಗಳ ನಡುವೆ ಅನುಮಾನದ ಕಿಚ್ಚು ಹತ್ತಿಕೊಂಡಿದ್ದು ನಗರದಲ್ಲಿ ಆತಂಕ ಮೂಡಿಸಿದೆ.

ಇತ್ತೀಚೆಗಷ್ಟೇ ದೇವಿಕಾ ಅವರು ಪತಿ ಹಾಗೂ ಮಕ್ಕಳೊಂದಿಗೆ ಶಬರಿಮಲೆಗೆ ಪ್ರವಾಸ ತೆರಳಿದ್ದರು. ಈ ಸಂದರ್ಭದಲ್ಲಿ ದೇವಿಕಾ ಅವರು ವಾಹನದ ಚಾಲಕನ ಜೊತೆ ಮಾತನಾಡಿದ್ದನ್ನು ಕಂಡು ಪತಿ ಕುಮಾರ್ ಶಂಕಿಸಿದ್ದ ಎನ್ನಲಾಗಿದೆ. ಪ್ರವಾಸದಿಂದ ಮರಳಿದ ಬಳಿಕವೂ ಇದೇ ವಿಷಯವಾಗಿ ಪತ್ನಿಯ ಮೇಲೆ ಪದೇ ಪದೇ ಅನುಮಾನ ವ್ಯಕ್ತಪಡಿಸಿ ಕುಮಾರ್ ಗಲಾಟೆ ಮಾಡುತ್ತಿದ್ದ. ಈ ಅನುಮಾನದ ಪರಕಾಷ್ಠೆಯೇ ಕೊಲೆಯಲ್ಲಿ ಅಂತ್ಯವಾಗಿದೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.

ಪತ್ನಿಯನ್ನು ಅಮಾನುಷವಾಗಿ ಕೊಂದ ಬಳಿಕ ಆರೋಪಿ ಕುಮಾರ್ ತಾನೂ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದಾನೆ. ಆದರೆ, ಕೂಡಲೇ ಎಚ್ಚೆತ್ತುಕೊಂಡ ಮಕ್ಕಳು ತಂದೆಯನ್ನು ತಡೆದು ದೊಡ್ಡ ಅವಘಡವನ್ನು ತಪ್ಪಿಸಿದ್ದಾರೆ. ಸದ್ಯ ಗೋವಿಂದರಾಜನಗರ ಪೊಲೀಸರು ಸ್ಥಳಕ್ಕೆ ಧಾವಿಸಿ ಆರೋಪಿ ಕುಮಾರ್‌ನನ್ನು ಬಂಧಿಸಿದ್ದಾರೆ. ಅನುಮಾನ ಎಂಬ ರೋಗ ಸುಂದರ ಸಂಸಾರವನ್ನು ಹೇಗೆ ಬೀದಿಪಾಲು ಮಾಡುತ್ತದೆ ಎಂಬುದಕ್ಕೆ ಈ ಘಟನೆ ಸಾಕ್ಷಿಯಾಗಿದೆ.

Comments (0)

Your email address will not be published. Required fields are marked *

Back to top button