Top Newsಜಿಲ್ಲೆಸುದ್ದಿ

ಪ್ರವಾಸದ ಜಗಳಕ್ಕೆ ಗೃಹಿಣಿ ಬಲಿ; ಕೊಲೆನಾ? ಆತ್ಮಹತ್ಯೆನಾ?

ಮೈಸೂರು: ಸರಸ್ವತಿಪುರಂನಲ್ಲಿ ಪ್ರವಾಸಕ್ಕೆ ಹೋಗುವ ವಿಚಾರದಲ್ಲಿ ದಂಪತಿಗಳ ನಡುವೆ ನಡೆದ ಸಣ್ಣ ಜಗಳವೊಂದು ಗೃಹಿಣಿಯೊಬ್ಬರ ಸಂಶಯಾಸ್ಪದ ಸಾವಿನಲ್ಲಿ ಅಂತ್ಯವಾಗಿದೆ. ಬೆಂಗಳೂರು ಮೂಲದ 46 ವರ್ಷದ ಸಂಧ್ಯಾ ಮೃತ ದುರ್ದೈವಿ. ಸುಮಾರು 25 ವರ್ಷಗಳ ಹಿಂದೆ ಚಾಮರಾಜನಗರದ ರಂಗನಾಥ್ ಎಂಬುವವರನ್ನು ಮದುವೆಯಾಗಿದ್ದ ಇವರು, ಮೈಸೂರಿನಲ್ಲಿ ಪತಿ ಮತ್ತು ಮಗ ಕೌಶಿಕ್ ಜೊತೆ ವಾಸವಾಗಿದ್ದರು. ಪ್ರವಾಸಕ್ಕೆ ಹೋಗುವ ವಿಚಾರವಾಗಿ ಪತಿ-ಪತ್ನಿ ನಡುವೆ ತೀವ್ರ ಮಾತಿನ ಚಕಮಕಿ ನಡೆದಿದ್ದು, ನಂತರ ಸಂಧ್ಯಾ ಅವರು ಮನೆಯ ಸೀಲಿಂಗ್ ಫ್ಯಾನ್‌ಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.

ಈ ಸಾವಿನ ಸುದ್ದಿ ತಿಳಿಯುತ್ತಿದ್ದಂತೆಯೇ ವಿದೇಶದಿಂದ ಆಗಮಿಸಿದ ಮಗಳು ಸೃಷ್ಟಿ, ತನ್ನ ತಂದೆ ರಂಗನಾಥ್ ಮತ್ತು ತಮ್ಮ ಕೌಶಿಕ್ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ತನ್ನ ತಾಯಿಯನ್ನು ತಂದೆ ಮತ್ತು ತಮ್ಮ ಸೇರಿ ಕೊಲೆ ಮಾಡಿದ್ದಾರೆ . ತಂದೆ ತನ್ನ ತಾಯಿಯನ್ನು ಸದಾ ಅನುಮಾನದಿಂದ ನೋಡುತ್ತಿದ್ದರು ಮತ್ತು ಹಣಕ್ಕಾಗಿ ಕಿರುಕುಳ ನೀಡುತ್ತಿದ್ದರು ಎಂದು ಆರೋಪಿಸಿರುವ ಮಗಳು, ತನ್ನ ತಾಯಿಯ ಅಂತ್ಯಸಂಸ್ಕಾರವನ್ನು ತಂದೆ ಅಥವಾ ತಮ್ಮ ಮಾಡಬಾರದು, ಬದಲಿಗೆ ಸಾಯುವ ಮುನ್ನ ತಾಯಿ ಬಯಸಿದಂತೆ ಅವರ ಸಹೋದರನೇ ನೆರವೇರಿಸಬೇಕು ಎಂದು ಪಟ್ಟು ಹಿಡಿದಿದ್ದಾರೆ.

ಮಗಳ ಆರೋಪವನ್ನು ಪತಿ ರಂಗನಾಥ್ ಸಂಪೂರ್ಣವಾಗಿ ತಳ್ಳಿಹಾಕಿದ್ದಾರೆ. ಪ್ರವಾಸದ ವಿಚಾರಕ್ಕೆ ಜಗಳವಾಗಿದ್ದು ನಿಜ, ಆದರೆ ತಾನು ಕೊಲೆ ಮಾಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ತಮ್ಮ ಆಸ್ತಿಯಲ್ಲಿ ಶೇ.90 ರಷ್ಟನ್ನು ಪತ್ನಿಯ ಹೆಸರಿಗೇ ಬರೆದಿದ್ದಾಗಿ ಹೇಳಿರುವ ಅವರು, ಮಗಳು ಯಾರದ್ದೋ ಮಾತು ಕೇಳಿ ಈ ರೀತಿ ಆರೋಪ ಮಾಡುತ್ತಿದ್ದಾಳೆ ಎಂದಿದ್ದಾರೆ. ಮಗ ಕೌಶಿಕ್ ಕೂಡ ತಂದೆಯ ಪರವಾಗಿ ಮಾತನಾಡಿದ್ದು, ತನಗೆ ಪರೀಕ್ಷೆ ಇರುವ ಕಾರಣ ಪ್ರವಾಸ ಬೇಡ ಎಂದಿದ್ದಕ್ಕೆ ತಾಯಿ ಸಿಟ್ಟಿನಿಂದ ಈ ನಿರ್ಧಾರ ಕೈಗೊಂಡಿದ್ದಾರೆ ಎಂದು ಹೇಳಿಕೆ ನೀಡಿದ್ದಾನೆ.

ಪ್ರಸ್ತುತ ಮೈಸೂರಿನ ಸರಸ್ವತಿಪುರಂ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ. ಮೇಲ್ನೋಟಕ್ಕೆ ಇದು ಆತ್ಮಹತ್ಯೆಯಂತೆ ಕಂಡರೂ, ಮಗಳ ಗಂಭೀರ ಆರೋಪದ ಹಿನ್ನೆಲೆಯಲ್ಲಿ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಮರಣೋತ್ತರ ಪರೀಕ್ಷೆ ಹಾಗೂ ಎಫ್‌ಎಸ್‌ಎಲ್ ವರದಿ ಬಂದ ನಂತರವಷ್ಟೇ ಇದು ಆತ್ಮಹತ್ಯೆಯೋ ಅಥವಾ ಕೊಲೆಯೋ ಎಂಬ ಸತ್ಯಾಂಶ ಹೊರಬರಬೇಕಿದೆ.

Comments (0)

Your email address will not be published. Required fields are marked *

Back to top button