ಜಿಲ್ಲೆಸುದ್ದಿ

ಹೊಸಕೋಟೆ ಸರಣಿ ಅಪಘಾತ;ವಿದ್ಯಾರ್ಥಿಗಳ ಅತಿವೇಗದ ‘ಜಾಲಿ ರೈಡ್’ಗೆ ಏಳು ಬಲಿ!

ಹೊಸಕೋಟೆ: ಎಂ. ಸತ್ಯವರ ಗ್ರಾಮದ ಬಳಿ ನಡೆದ ಭೀಕರ ಸರಣಿ ಅಪಘಾತದ ಹಿಂದೆ ಬೆಂಗಳೂರಿನ ಕಾಲೇಜು ವಿದ್ಯಾರ್ಥಿಗಳ ಅತಿವೇಗದ ಚಾಲನೆಯೇ ಕಾರಣ ಎಂಬ ಆಘಾತಕಾರಿ ಅಂಶ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಬೆಂಗಳೂರಿನ ಪ್ರತಿಷ್ಠಿತ ಕಾಲೇಜೊಂದರಲ್ಲಿ ಪಿಯುಸಿ ವ್ಯಾಸಂಗ ಮಾಡುತ್ತಿದ್ದ ಆರು ಮಂದಿ ವಿದ್ಯಾರ್ಥಿಗಳು ಎಕ್ಸ್‌ಯುವಿ 700 ಕಾರಿನಲ್ಲಿ ಲಾಂಗ್ ಡ್ರೈವ್ ಹೊರಟಿದ್ದಾಗ ಈ ದುರಂತ ಸಂಭವಿಸಿದೆ. ನೂತನ ಹೆದ್ದಾರಿಯಲ್ಲಿ ಮಿತಿಮೀರಿದ ವೇಗದಲ್ಲಿ ಕಾರು ಚಲಾಯಿಸಿದ್ದೇ ಏಳು ಮಂದಿಯ ಪ್ರಾಣಪಕ್ಷಿ ಹಾರಿಹೋಗಲು ಮುಖ್ಯ ಕಾರಣ ಎನ್ನಲಾಗಿದೆ.

ಅಪಘಾತದ ಭೀಕರತೆ ಎಷ್ಟಿತ್ತೆಂದರೆ, ಅತಿವೇಗವಾಗಿ ಬಂದ ಕಾರು ಮೊದಲು ಗಗನ್ ಎಂಬುವವರ ಬೈಕ್‌ಗೆ ಡಿಕ್ಕಿ ಹೊಡೆದಿದೆ. ಅಷ್ಟಕ್ಕೇ ನಿಲ್ಲದ ಕಾರು ಚಾಲಕನ ನಿಯಂತ್ರಣ ತಪ್ಪಿ ಮುಂದೆ ಸಾಗುತ್ತಿದ್ದ ಕ್ಯಾಂಟರ್ ವಾಹನಕ್ಕೆ ಜೋರಾಗಿ ಗುದ್ದಿದೆ. ಈ ಡಿಕ್ಕಿಯ ರಭಸಕ್ಕೆ ಕ್ಯಾಂಟರ್ ವಾಹನದ ಆಕ್ಸಲ್ ಕಟ್ ಆಗಿ ಅದು ಪಕ್ಕದ ಸರ್ವೀಸ್ ರಸ್ತೆಗೆ ಎಗರಿ ಬಿದ್ದಿದೆ. ಇದೇ ವೇಳೆ ರಸ್ತೆಯಲ್ಲಿ ಬಿದ್ದಿದ್ದ ಆಕ್ಸಲ್‌ಗೆ ಮತ್ತೊಂದು ಬ್ರೀಜಾ ಕಾರು ಡಿಕ್ಕಿ ಹೊಡೆದಿದ್ದು, ಅದೃಷ್ಟವಶಾತ್ ಆ ಕಾರಿನಲ್ಲಿದ್ದ ನಾಲ್ವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

https://youtu.be/gxS4yxfF_W4?si=iHm4g-bM5dUT5QwN

ಈ ಭೀಕರ ಸರಣಿ ಅಪಘಾತದಲ್ಲಿ ಬೈಕ್ ಸವಾರ ಸೇರಿದಂತೆ ಒಟ್ಟು ಏಳು ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೃತಪಟ್ಟ ಬೈಕ್ ಸವಾರ ಸ್ಥಳೀಯ ನಿವಾಸಿಯಾಗಿದ್ದು, ಕಾರಿನಲ್ಲಿದ್ದ ವಿದ್ಯಾರ್ಥಿಗಳು ಬೆಂಗಳೂರಿನ ಕೊತ್ತನೂರು ಮೂಲದವರು ಎಂದು ಗುರುತಿಸಲಾಗಿದೆ. ಘಟನಾ ಸ್ಥಳಕ್ಕೆ ಬೆಂಗಳೂರು ಗ್ರಾಮಾಂತರ ಎಸ್ಪಿ ಚಂದ್ರಕಾಂತ್ ಮತ್ತು ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅತಿವೇಗ ಮತ್ತು ಅಜಾಗರೂಕ ಚಾಲನೆಯೇ ಈ ದುರಂತಕ್ಕೆ ಮೂಲ ಕಾರಣ ಎಂದು ಪೊಲೀಸರು ತಿಳಿಸಿದ್ದರೂ, ಹೆದ್ದಾರಿಯ ಕಳಪೆ ವಿನ್ಯಾಸದ ಬಗ್ಗೆಯೂ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Comments (0)

Your email address will not be published. Required fields are marked *

Back to top button