
ನವದೆಹಲಿ: ದೆಹಲಿಯಲ್ಲಿ ಜಾರಿಯಲ್ಲಿರುವ ಉಚಿತ ವಿದ್ಯುತ್ ಯೋಜನೆಗೆ ಕಡಿವಾಣ ಬೀಳುವ ಸಾಧ್ಯತೆ ಇದೆ ಎಂಬ ಚರ್ಚೆಗಳು ಜೋರಾಗಿವೆ. ಏಪ್ರಿಲ್‌ನಿಂದ ವಿದ್ಯುತ್ ದರ ಏರಿಕೆ ಆಗಬಹುದು ಎಂಬ ಸುಳಿವುಗಳು ಹೊರಬಿದ್ದಿವೆ.
ಸರ್ಕಾರ ಮತ್ತು ವಿದ್ಯುತ್ ವಿತರಣೆ ಕಂಪನಿಗಳ ನಡುವಿನ ಭಾರೀ ಬಾಕಿ ಉಳಿದಿರುವ ಕಾರಣದಂದ ಸುಮಾರು ₹38,000 ಕೋಟಿ ಮೊತ್ತವನ್ನು ವಸೂಲಿ ಮಾಡಬೇಕೆಂಬ ಯೋಜನೆ ರೂಪಿಸಲಾಗುತ್ತಿದೆ. ಇದಕ್ಕಾಗಿ ವಿದ್ಯುತ್ ಬಿಲ್ಲುಗಳ ಮೇಲೆ ಹೆಚ್ಚುವರಿ ಶುಲ್ಕ ವಿಧಿಸುವ ಸಾಧ್ಯತೆ ಇದೆ.
ಕಳೆದ ಹಲವು ವರ್ಷಗಳಿಂದ ವಿದ್ಯುತ್ ದರಗಳನ್ನು ಪರಿಷ್ಕರಿಸದೇ ಇರುವುದರಿಂದ ಡಿಸ್ಕಾಂಗಳ ಮೇಲೆ ಆರ್ಥಿಕ ಒತ್ತಡ ಹೆಚ್ಚಾಗಿದೆ . ನಿಯಂತ್ರಣ ಆಸ್ತಿಗಳ ಪ್ರಮಾಣವೂ ಏರಿಕೆಯಾಗಿದ್ದು, ಇದು ದರ ಏರಿಕೆಗೆ ಮತ್ತೊಂದು ಕಾರಣವಾಗಿದೆ.
ಇದಲ್ಲದೆ , ಸುಪ್ರೀಂ ಕೋರ್ಟ್ ಸೂಚನೆಯಂತೆ ಬಾಕಿ ಹಣವನ್ನು ನಿಗದಿತ ಅವಧಿಯಲ್ಲಿ ವಸೂಲಿ ಮಾಡಬೇಕಿರುವುದು ಸರ್ಕಾರದ ಮೇಲೆ ಒತ್ತಡ ತಂದಿದೆ. ಆದರೆ, ಉಚಿತ ವಿದ್ಯುತ್ ಯೋಜನೆ ಸಂಪೂರ್ಣ ರದ್ದು ಮಾಡುವ ಬಗ್ಗೆ ಇನ್ನೂ ಯಾವುದೇ ಅಧಿಕೃತ ಘೋಷಣೆ ಇಲ್ಲ.
200 ಯೂನಿಟ್ವರೆಗೆ ಉಚಿತ ವಿದ್ಯುತ್ ಸೌಲಭ್ಯ ಮುಂದುವರಿಯುವ ಸಾಧ್ಯತೆ ಇದೆ. ಆದರೆ ಸಬ್ಸಿಡಿಯನ್ನು ಕೆಲವರಿಗೆ ಮಾತ್ರ ಮಿತಿಗೊಳಿಸುವ ಬಗ್ಗೆ ಚರ್ಚೆ ನಡೆಯುತ್ತಿದೆ. ಖಾಲಿ ಮನೆಗಳಿಗೆ ನೀಡುತ್ತಿದ್ದ ಸಬ್ಸಿಡಿ ಕಡಿತ ಮಾಡುವ ಪ್ರಸ್ತಾವನೆಯೂ ಇದೆ.
ಒಟ್ಟಿನಲ್ಲಿ, ದೆಹಲಿಯಲ್ಲಿ ವಿದ್ಯುತ್ ದರ ಏರಿಕೆ ಸಾಧ್ಯತೆ ಇದ್ದರೂ, ಫ್ರೀ ವಿದ್ಯುತ್ ಯೋಜನೆಗೆ ತಕ್ಷಣವೇ ಗುಡ್ ಬೈ ಹೇಳುವುದು ಸ್ಪಷ್ಟವಾಗಿಲ್ಲ. ಅಂತಿಮ ನಿರ್ಧಾರಕ್ಕಾಗಿ ಏಪ್ರಿಲ್ ವರೆಗೆ ಕಾಯಬೇಕಾಗಿದೆ.




