ಜಿಲ್ಲೆಸುದ್ದಿ

ಗಿರಿನಗರ ಇಂಡಿಯನ್ ಬ್ಯಾಂಕ್‌ನಲ್ಲಿ 4 ಕೋಟಿ ಮೌಲ್ಯದ ಚಿನ್ನ ಲೂಟಿ!

ಬೆಂಗಳೂರು : ಗಿರಿನಗರದ ಇಂಡಿಯನ್ ಬ್ಯಾಂಕ್ ಶಾಖೆಯಲ್ಲಿ ನಡೆದ ಈ ಘಟನೆ ಬ್ಯಾಂಕ್ ಗ್ರಾಹಕರಲ್ಲಿ ತೀವ್ರ ಆತಂಕ ಮೂಡಿಸಿದೆ. ಬೇಲಿಯೇ ಎದ್ದು ಹೊಲ ಮೇಯ್ದಂತೆ, ಬ್ಯಾಂಕಿನ ಭದ್ರತೆ ಕಾಪಾಡಬೇಕಿದ್ದ ಸಹಾಯಕ ವ್ಯವಸ್ಥಾಪಕ ಕಿರಣ್ ಕುಮಾರ್ ಅವರೇ ಈ ಭೀಕರ ಕಳ್ಳತನ ಎಸಗಿರುವುದು ಅಚ್ಚರಿ ಮೂಡಿಸಿದೆ. ಆನ್‌ಲೈನ್ ಬೆಟ್ಟಿಂಗ್ ಮತ್ತು ಜೂಜಾಟದ ಚಟಕ್ಕೆ ಬಿದ್ದಿದ್ದ ಕಿರಣ್, ಸುಲಭವಾಗಿ ಹಣ ಮಾಡುವ ಉದ್ದೇಶದಿಂದ ಗ್ರಾಹಕರು ನಂಬಿಕೆಯಿಂದ ಇಟ್ಟಿದ್ದ ಸುಮಾರು 4 ಕೋಟಿ ರೂಪಾಯಿ ಮೌಲ್ಯದ ಚಿನ್ನಾಭರಣಗಳನ್ನು ಹಂತ ಹಂತವಾಗಿ ಜೇಬಿಗಿಳಿಸಿಕೊಂಡಿದ್ದಾನೆ.

ಬ್ಯಾಂಕಿನ ಲಾಕರ್ ಕೀಗಳು ಮ್ಯಾನೇಜರ್ ಮತ್ತು ಅಸಿಸ್ಟೆಂಟ್ ಮ್ಯಾನೇಜರ್ ಬಳಿ ಇರುತ್ತವೆ. ಮ್ಯಾನೇಜರ್ ಇಲ್ಲದ ಸಮಯವನ್ನೇ ಬಂಡವಾಳ ಮಾಡಿಕೊಂಡ ಕಿರಣ್, ಲಾಕರ್ ತೆರೆದು ಅಡವಿಟ್ಟಿದ್ದ ಚಿನ್ನವನ್ನು ಕದಿಯುತ್ತಿದ್ದನು. ಜನವರಿ 2ರಂದು ಗ್ರಾಹಕರೊಬ್ಬರು ತಮ್ಮ ಚಿನ್ನ ಪಡೆಯಲು ಬಂದಾಗ ಈ ಕೃತ್ಯ ಬೆಳಕಿಗೆ ಬಂದಿದೆ. ಹೆಚ್ಚಿನ ತಪಾಸಣೆ ನಡೆಸಿದಾಗ 21 ಪ್ಯಾಕೆಟ್‌ಗಳಲ್ಲಿ ಅಲ್ಪಸ್ವಲ್ಪ ಹಾಗೂ 3 ಪ್ಯಾಕೆಟ್‌ಗಳಲ್ಲಿದ್ದ ಸಂಪೂರ್ಣ ಚಿನ್ನ ಮಾಯವಾಗಿರುವುದು ಪತ್ತೆಯಾಗಿದೆ. ಒಟ್ಟು 2,783 ಗ್ರಾಂ ಚಿನ್ನ ನಾಪತ್ತೆಯಾಗಿದ್ದು, ಇದರ ಮೌಲ್ಯ ಅಂದಾಜು 4 ಕೋಟಿ ರೂಪಾಯಿ ಎಂದು ಲೆಕ್ಕ ಹಾಕಲಾಗಿದೆ.

ಬ್ಯಾಂಕಿನ ಆಂತರಿಕ ವಿಚಾರಣೆ ವೇಳೆ ಕಿರಣ್ ಕುಮಾರ್ ತನ್ನ ತಪ್ಪನ್ನು ಒಪ್ಪಿಕೊಂಡಿದ್ದು, ಕದ್ದ ಚಿನ್ನವನ್ನು ವಿವಿಧ ಗಿರವಿ ಅಂಗಡಿಗಳಲ್ಲಿ ಇಟ್ಟು ಬಂದ ಹಣವನ್ನು ಜೂಜಾಟಕ್ಕೆ ಖಾಲಿ ಮಾಡಿರುವುದಾಗಿ ತಿಳಿಸಿದ್ದಾನೆ. ಈ ಸಂಬಂಧ ಗಿರಿನಗರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದ್ದು, ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ. ಸದ್ಯಕ್ಕೆ 700 ಗ್ರಾಂ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದ್ದು, ಉಳಿದ ಚಿನ್ನದ ಪತ್ತೆಗಾಗಿ ತನಿಖೆ ಚುರುಕುಗೊಂಡಿದೆ.

Comments (0)

Your email address will not be published. Required fields are marked *

Back to top button