ರಾಜ್ಯಸುದ್ದಿ

ಕದನ ವಿರಾಮದ ಬೆನ್ನಲ್ಲೇ ಚಿನ್ನ, ಬೆಳ್ಳಿ ದರದಲ್ಲಿ ಭಾರಿ ಏರಿಕೆ..!

ಇರಾನ್, ಅಮೆರಿಕ ಮತ್ತು ಇಸ್ರೇಲ್ ನಡುವೆ ಕದನ ವಿರಾಮ ಘೋಷಣೆಯಾದ ಬೆನ್ನಲ್ಲೇ ಜಾಗತಿಕ ಮಾರುಕಟ್ಟೆಯಲ್ಲಿ ಮಹತ್ವದ ಬದಲಾವಣೆಗಳಾಗಿದ್ದು, ಸತತ ಮೂರು ವಾರಗಳ ಇಳಿಕೆಯ ನಂತರ ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ ಭಾರೀ ಏರಿಕೆ ಕಂಡುಬಂದಿದೆ. ಯುದ್ಧದ ಭೀತಿ ಕಡಿಮೆಯಾಗಿ ಕಚ್ಚಾ ತೈಲದ ಬೆಲೆ ಕುಸಿದಿದ್ದರೂ, ಹೂಡಿಕೆದಾರರ ಒಲವು ಚಿನ್ನದತ್ತ ಮರಳಿರುವುದು ಬೆಲೆ ಹೆಚ್ಚಳಕ್ಕೆ ಕಾರಣವಾಗಿದೆ ಎನ್ನಲಾಗಿದೆ. ಏಪ್ರಿಲ್ 8ರ ವರದಿಯಂತೆ, 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ 1,53,820 ರೂ. ತಲುಪಿದ್ದು, ಒಂದೇ ದಿನದಲ್ಲಿ 3,980 ರೂ.ಗಳಷ್ಟು ಬೃಹತ್ ಏರಿಕೆ ಕಂಡಿದೆ.

ಅಭರಣ ತಯಾರಿಕೆಯಲ್ಲಿ ಹೆಚ್ಚಾಗಿ ಬಳಕೆಯಾಗುವ 22 ಕ್ಯಾರೆಟ್ ಚಿನ್ನದ ಬೆಲೆಯೂ ಗಣನೀಯವಾಗಿ ಹೆಚ್ಚಾಗಿದ್ದು, 10 ಗ್ರಾಂ ಚಿನ್ನದ ದರ 1,41,000 ರೂ. ಆಗಿದೆ. ಇದು ಹಿಂದಿನ ದಿನಕ್ಕೆ ಹೋಲಿಸಿದರೆ 3,650 ರೂ.ಗಳಷ್ಟು ದುಬಾರಿಯಾದಂತಾಗಿದೆ. ಅದೇ ರೀತಿ 18 ಕ್ಯಾರೆಟ್ ಚಿನ್ನದ ಬೆಲೆಯು 10 ಗ್ರಾಂಗೆ 1,15,370 ರೂ.ಗೆ ಏರಿಕೆಯಾಗಿದ್ದು, ಗ್ರಾಹಕರಿಗೆ ಬಿಸಿ ಮುಟ್ಟಿಸಿದೆ. ಯುದ್ಧದ ಅನಿಶ್ಚಿತತೆ ಅಂತ್ಯಗೊಳ್ಳುತ್ತಿರುವ ಹೊತ್ತಿನಲ್ಲಿ ಮಾರುಕಟ್ಟೆಯಲ್ಲಿನ ಈ ದಿಢೀರ್ ಏರಿಳಿತವು ಆರ್ಥಿಕ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.

ಚಿನ್ನದ ಜೊತೆಗೆ ಬೆಳ್ಳಿಯ ಬೆಲೆಯೂ ದಾಖಲೆ ಮಟ್ಟದಲ್ಲಿ ಜಿಗಿತ ಕಂಡಿದ್ದು, ಕೇವಲ ಒಂದೇ ದಿನದಲ್ಲಿ ಪ್ರತಿ ಕೆಜಿಗೆ 10,000 ರೂ.ಗಳಷ್ಟು ಏರಿಕೆಯಾಗಿದೆ. ಏಪ್ರಿಲ್ 7ರಂದು 2,50,000 ರೂ. ಇದ್ದ ಒಂದು ಕೆಜಿ ಬೆಳ್ಳಿಯ ಬೆಲೆ ಈಗ 2,60,000 ರೂ. ತಲುಪಿದೆ. ಅಂದರೆ ಒಂದು ಗ್ರಾಂ ಬೆಳ್ಳಿಯ ಬೆಲೆ ಈಗ 260 ರೂ. ಆಗಿದೆ. ಅಂತರಾಷ್ಟ್ರೀಯ ರಾಜತಾಂತ್ರಿಕ ಬೆಳವಣಿಗೆಗಳು ಮತ್ತು ಕದನ ವಿರಾಮದ ಘೋಷಣೆಯು ಇಂಧನ ಮಾರುಕಟ್ಟೆಗೆ ನಿರಾಳತೆ ತಂದಿದ್ದರೂ, ಅಮೂಲ್ಯ ಲೋಹಗಳ ಬೆಲೆ ಏರಿಕೆಯು ಜನಸಾಮಾನ್ಯರ ಮೇಲೆ ಪರಿಣಾಮ ಬೀರಿದೆ.

Comments (0)

Your email address will not be published. Required fields are marked *

Back to top button