
ಹೈದರಾಬಾದ್: ತಮಿಳುನಾಡು ಮಾಜಿ ಮುಖ್ಯಮಂತ್ರಿ ದಿವಂಗತ ಜಯಲಲಿತಾ ಅವರಿಗೆ ಸೇರಿದ ಹೈದರಾಬಾದ್‌ನ ಬಂಗಲೆಗೆ ಸುಮಾರು 1.5 ಕೋಟಿ ರೂಪಾಯಿ ಆಸ್ತಿ ತೆರಿಗೆ ಬಾಕಿ ಇರುವ ಹಿನ್ನೆಲೆಯಲ್ಲಿ ಗ್ರೇಟರ್ ಹೈದರಾಬಾದ್ ಮುನ್ಸಿಪಲ್ ಕಾರ್ಪೊರೇಷನ್ (ಜಿಎಚ್‌ಎಂಸಿ) ಅಧಿಕಾರಿಗಳು ಬೀಗ ಹಾಕಿದ್ದಾರೆ. 2017 ರಿಂದಲೂ ಶ್ರೀನಗರ ಕಾಲೊನಿಯಲ್ಲಿರುವ ಈ ಆಸ್ತಿಗೆ ತೆರಿಗೆ ಪಾವತಿಯಾಗಿಲ್ಲ ಎನ್ನಲಾಗಿದ್ದು, ಈ ಹಿಂದೆ ಈ ಮನೆಯನ್ನು ಉದ್ಯಮಿ ವಿಜಯ್ ಮಲ್ಯ ಅವರಿಗೆ ಗುತ್ತಿಗೆಗೆ ನೀಡಿದ್ದ ಅವಧಿಯಿಂದಲೇ ಬಾಕಿ ಮೊತ್ತ ಹೆಚ್ಚಾಗುತ್ತಾ ಬಂದಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಜಯಲಲಿತಾ ಅವರ ಕಾನೂನುಬದ್ಧ ಉತ್ತರಾಧಿಕಾರಿಗಳಿಗೆ ಬಾಕಿ ಪಾವತಿಸುವಂತೆ ಹಲವು ಬಾರಿ ನೋಟಿಸ್ ನೀಡಿದರೂ ಯಾವುದೇ ಪ್ರತಿಕ್ರಿಯೆ ಬಾರದ ಕಾರಣ, ಪ್ರಸಕ್ತ ಸಾಲಿನ ತೆರಿಗೆ ವಸೂಲಿ ಅಭಿಯಾನದ ಭಾಗವಾಗಿ ಈ ಕ್ರಮ ಕೈಗೊಳ್ಳಲಾಗಿದೆ. ಮಾರ್ಚ್ 31ರ ಒಳಗಾಗಿ ಬಾಕಿ ಉಳಿಸಿಕೊಂಡಿರುವ ಪ್ರಮುಖ ಆಸ್ತಿಗಳ ವಿರುದ್ಧ ಕಠಿಣ ಕ್ರಮ ಜರುಗಿಸಲು ಮುಂದಾಗಿರುವ ಪಾಲಿಕೆಯು ಈ ಐಷಾರಾಮಿ ಬಂಗಲೆಯನ್ನು ಸೀಲ್ ಮಾಡಿದೆ.




