ಬೆಂಗಳೂರು: ರಾಜ್ಯ ಕಾಂಗ್ರೆಸ್ನಲ್ಲಿ ಅಧಿಕಾರ ಹಂಚಿಕೆ ಸಮರ ಭಾರೀ ಸದ್ದು ಮಾಡುತ್ತಿದೆ.. ಸಿದ್ದರಾಮಯ್ಯ ನೇತೃತ್ವದ ಸರ್ಕಾರಕ್ಕೆ ಎರಡೂವರೆ ವರ್ಷ ಭರ್ತಿಯಾಗುತ್ತಿದ್ದಂತೆ ಸಿಎಂ ಸಿದ್ದರಾಮಯ್ಯ ಬಣ ಒಂದುಕಡೆಯಾದರೆ, ಡಿಸಿಎಂ ಡಿ.ಕೆ ಶಿವಕುಮಾರ್ ಬಣ ಮತ್ತೊಂದು ಕಡೆ ಇದೆ.
ಬೆಂಗಳೂರಿನಲ್ಲಿ ಸಿಎಂ ಸಿದ್ದರಾಮಯ್ಯ ಬಣದ ಸಚಿವ ರಹಸ್ಯ ಸಭೆ ನಡೆಸಿದ್ದು, ಕರ್ನಾಟಕ ಕಾಂಗ್ರೆಸ್ನಲ್ಲಿ ಮಹತ್ವದ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಇನ್ನು ಈ ಬಣದ ರಾಜಕೀಯ ಚಟುವಟಿಕೆಗಳ ಬಗ್ಗೆ ಸ್ವತಃ ಡಿಸಿಎಂ ಡಿಕೆ ಶಿವಕುಮಾರ್ ಖಡಕ್ ಸ್ಪಷ್ಟನೆ ನೀಡಿದ್ದಾರೆ.
ಬೆಂಗಳೂರಿನ ಸದಾಶಿವನಗರದ ತಮ್ಮ ನಿವಾಸದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಡಿಕೆಶಿ, ಕಳೆದ ಎರಡೂವರೆ ವರ್ಷಗಳಿಂದ ಸಾಕಷ್ಟು ಔತಣಕೂಟ ನಡೆದಿದೆ. ನಾಲ್ವರು ಡಿಸಿಎಂ ಮಾಡಬೇಕು, ಕೆಪಿಸಿಸಿ ಅಧ್ಯಕ್ಷ ಸ್ಥಾನ ಬದಲಿಸಬೇಕು. ಸಂಪುಟಕ್ಕೆ ತಮ್ಮನ್ನು ಸೇರಿಸಿಕೊಳ್ಳಬೇಕೆಂದು ಸಾಕಷ್ಟು ಡಿನ್ನರ್ ಸಭೆ ನಡೆದಿವೆ. ಸಚಿವರ ಡಿನ್ನರ್ ಕೂಡ ಅದರ ಒಂದು ಭಾಗವೇ ಇದು ಎಂದು ಮಾರ್ಮಿಕವಾಗಿ ಹೇಳಿದರು.
ಇನ್ನು ಇದೇ ವೇಳೆ 5 ವರ್ಷ ನಾನೇ ಸಿಎಂ ಆಗಿರುತ್ತೇನೆಂದು ಸಿದ್ದರಾಮಯ್ಯ ಹೇಳಿಕೆಗೆ ಡಿಕೆಶಿ ಪ್ರತಿಕ್ರಿಯಿಸಿದ್ದು, ಸಿಎಂ ಸಿದ್ದರಾಮಯ್ಯಗೆ ಶುಭಾಶಯ ಹೇಳುತ್ತೇನೆ. ಅವರಿಗೆ ಎಲ್ಲವೂ ಒಳ್ಳೆಯದಾಗಲಿ ಎಂದು ಹಾರೈಸಿದರು. ಈ ಮೂಲಕ ಸಿಎಂ ಆಗಿ ತಾವೇ ಸಿಎಂ ಆಗಿ ಮುಂದುವರೆಯುತ್ತೇನೆ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ್ದಾರೆ.
ಸಚಿವರು ದೆಹಲಿ ಭೇಟಿ ವಿಚಾರದ ಬಗ್ಗೆ ಮಾತನಾಡಿದ ಡಿಕೆಶಿ, ಅವರೆಲ್ಲರಿಗೂ ಹಕ್ಕಿದೆ. ನಾನು ಯಾರೊಬ್ಬರನ್ನೂ ಕರೆದುಕೊಂಡು ಹೋಗಿಲ್ಲ. ಕೆಲವರು ಹೋಗಿ ಖರ್ಗೆ ಅವರನ್ನ ಹೋಗಿ ಭೇಟಿ ಮಾಡಿದ್ದಾರೆ. ಬಳಿಕ ಸಿಎಂ ಕೂಡ ಹೋಗಿ ಭೇಟಿಯಾಗಿದ್ದಾರೆ. ಕೆಲವರು ಪ್ಲೈಟ್ ನಲ್ಲಿ ಹೋಗಿದ್ರು. ಅದ್ರಲ್ಲಿ ತಪ್ಪೇನಿದೆ.? ಅವರು ಹೋಗಿದ್ದಾರೆ ಅದು ಅವರ ಲೈಫ್. ಅವರನ್ನ ಯಾರು ಕರೆದಿರಲಿಲ್ಲ. ಅವರೇ ವಾಲೆಂಟಿಯರ್ ಆಗಿ ಹೋಗಿ ಮುಖ ತೋರಿಸುತ್ತಿದ್ದಾರೆ ಎಂದಿದ್ದಾರೆ.


