ಬೆಂಗಳೂರು: ಗೋವಿಂದರಾಜನಗರದಲ್ಲಿ ನಂಬಲಸಾಧ್ಯವಾದ ಭೀಕರ ಘಟನೆಯೊಂದು ನಡೆದಿದ್ದು, ದಶಕಗಳ ಕಾಲ ಜೊತೆಯಾಗಿ ಬಾಳಿದ್ದ ದಾಂಪತ್ಯ ರಕ್ತಸಿಕ್ತವಾಗಿ ಅಂತ್ಯಗೊಂಡಿದೆ. ಕೇವಲ ಅನುಮಾನದ ಕಾರಣಕ್ಕೆ ಪತಿ ಕುಮಾರ್ ತನ್ನ 50 ವರ್ಷದ ಪತ್ನಿ ದೇವಿಕಾಳನ್ನು ಮಚ್ಚಿನಿಂದ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಿದ್ದಾನೆ. ಮದುವೆಯಾಗಿ 40 ವರ್ಷಗಳ ಕಾಲ ಸುಖವಾಗಿ ಸಂಸಾರ ನಡೆಸಿದ್ದ ಈ ದಂಪತಿಗಳ ನಡುವೆ ಇತ್ತೀಚೆಗೆ ಮೂಡಿದ ಸಣ್ಣ ಅನುಮಾನದ ಕಿಡಿ ದೊಡ್ಡ ದುರಂತಕ್ಕೆ ಕಾರಣವಾಗಿದೆ.
ಘಟನೆಯ ಹಿನ್ನೆಲೆಯು ಇತ್ತೀಚೆಗೆ ಕುಟುಂಬ ಸದಸ್ಯರು ಕೈಗೊಂಡಿದ್ದ ಕೇರಳ ಪ್ರವಾಸಕ್ಕೆ ಸಂಬಂಧಿಸಿದೆ ಎನ್ನಲಾಗಿದೆ. ಪ್ರವಾಸದ ವೇಳೆ ದೇವಿಕಾ ಅವರು ಚಾಲಕನ ಜೊತೆ ಮಾತನಾಡಿದ್ದನ್ನು ಕಂಡು ಪತಿ ಕುಮಾರ್ ಶೀಲ ಶಂಕಿಸಿದ್ದ. ಕಳೆದ ಒಂದು ತಿಂಗಳಿನಿಂದ ಇದೇ ವಿಷಯವಾಗಿ ಪತ್ನಿಯ ಮೇಲೆ ವಿಪರೀತ ಅನುಮಾನ ಹೊಂದಿದ್ದ ಆತ, ಮನೆಯಲ್ಲಿ ಸದಾ ಗಲಾಟೆ ಮಾಡುತ್ತಿದ್ದ. ಅದರಂತೆ ನಿನ್ನೆ ತಡರಾತ್ರಿ ದೇವಿಕಾ ಅವರು ಮಲಗಿದ್ದಾಗಲೇ ಮಚ್ಚಿನಿಂದ ದಾಳಿ ನಡೆಸಿ ಅವರ ಪ್ರಾಣಪಕ್ಷಿ ಹಾರಿಸಿದ್ದಾನೆ.
ಈ ಘಟನೆಯ ನಂತರ ಆರೋಪಿ ಕುಮಾರ್ ನಡೆದುಕೊಂಡ ರೀತಿ ಮತ್ತಷ್ಟು ಆತಂಕಕಾರಿಯಾಗಿದೆ. ಪತ್ನಿಯನ್ನು ಕೊಂದ ಬಳಿಕ ತನ್ನ ಮಗನಿಗೆ ಫೋನ್ ಮಾಡಿದ ಆತ, “ನಿಮ್ಮ ತಾಯಿಯನ್ನು ಕೊಂದಿದ್ದೀನಿ, ನಾನು ಕೂಡ ನೇಣು ಹಾಕಿಕೊಳ್ಳುತ್ತೇನೆ ಬನ್ನಿ” ಎಂದು ತಿಳಿಸಿದ್ದಾನೆ. ತಕ್ಷಣ ಎಚ್ಚೆತ್ತ ಮಕ್ಕಳು ಸ್ಥಳಕ್ಕೆ ಧಾವಿಸಿ ತಂದೆ ಆತ್ಮಹತ್ಯೆ ಮಾಡಿಕೊಳ್ಳುವುದನ್ನು ತಡೆದು ಪೊಲೀಸರಿಗೆ ಒಪ್ಪಿಸಿದ್ದಾರೆ. ತಂದೆಯ ಈ ಪೈಶಾಚಿಕ ಕೃತ್ಯದಿಂದ ಬೆಚ್ಚಿಬಿದ್ದಿರುವ ಮಕ್ಕಳು, ತಮ್ಮ ತಂದೆಯ ವಿರುದ್ಧವೇ ತಿರುಗಿಬಿದ್ದಿದ್ದಾರೆ.
ಮೃತ ದೇವಿಕಾ ಅವರ ಪುತ್ರಿ ಶಾಲಿನಿ ಮಾಧ್ಯಮಗಳ ಮುಂದೆ ಕಣ್ಣೀರು ಹಾಕುತ್ತಾ, “ನಮ್ಮ ತಂದೆ ಈ ಮೊದಲು ಹೀಗಿರಲಿಲ್ಲ, ಒಂದು ತಿಂಗಳಿನಿಂದ ಅನುಮಾನ ಮಾಡುತ್ತಿದ್ದರು. ಈ ಪರಿಸ್ಥಿತಿ ಯಾರಿಗೂ ಬರಬಾರದು. ನಮಗೆ ಇಂತಹ ತಂದೆ ಬೇಡ, ಆತನಿಗೆ ಜಾಮೀನು ಕೊಡಿಸಲು ನಾವು ಹೋಗುವುದಿಲ್ಲ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸದ್ಯ ಗೋವಿಂದರಾಜನಗರ ಪೊಲೀಸರು ಆರೋಪಿಯನ್ನು ಬಂಧಿಸಿ ತನಿಖೆ ಮುಂದುವರಿಸಿದ್ದಾರೆ. 40 ವರ್ಷದ ಸುಂದರ ಸಂಸಾರ ಅನುಮಾನದ ಕಿಚ್ಚಿಗೆ ಭಸ್ಮವಾಗಿರುವುದು ಸಾರ್ವಜನಿಕರಲ್ಲಿ ವಿಷಾದ ಮೂಡಿಸಿದೆ.


