ಉಪಚುನಾವಣೆ ಅಖಾಡಕ್ಕೆ ಕಾಂಗ್ರೆಸ್ ಅಭ್ಯರ್ಥಿಗಳು; ದಾವಣಗೆರೆ ದಕ್ಷಿಣಕ್ಕೆ ಸಮರ್ಥ್, ಬಾಗಲಕೋಟೆಗೆ ಉಮೇಶ್ ಮೇಟಿ!

ಕರ್ನಾಟಕದ ಎರಡು ಪ್ರಮುಖ ವಿಧಾನಸಭಾ ಕ್ಷೇತ್ರಗಳಾದ ದಾವಣಗೆರೆ ದಕ್ಷಿಣ ಮತ್ತು ಬಾಗಲಕೋಟೆ ಉಪಚುನಾವಣೆಗೆ ಕಾಂಗ್ರೆಸ್ ಹೈಕಮಾಂಡ್ ಕೊನೆಗೂ ತನ್ನ ಅಭ್ಯರ್ಥಿಗಳ ಹೆಸರನ್ನು ಅಧಿಕೃತವಾಗಿ ಪ್ರಕಟಿಸಿದೆ. ದಾವಣಗೆರೆ ದಕ್ಷಿಣ ಕ್ಷೇತ್ರದಿಂದ ಹಿರಿಯ ನಾಯಕ ದಿವಂಗತ ಶಾಮನೂರು ಶಿವಶಂಕರಪ್ಪ ಅವರ ಮೊಮ್ಮಗ ಸಮರ್ಥ್ ಶಾಮನೂರು ಅವರಿಗೆ ಟಿಕೆಟ್ ನೀಡಲಾಗಿದ್ದರೆ, ಬಾಗಲಕೋಟೆ ಕ್ಷೇತ್ರದಿಂದ ದಿವಂಗತ ಹೆಚ್.ವೈ. ಮೇಟಿ ಅವರ ಕಿರಿಯ ಪುತ್ರ ಉಮೇಶ್ ಮೇಟಿ ಅವರನ್ನು ಕಣಕ್ಕಿಳಿಸಲು ನಿರ್ಧರಿಸಲಾಗಿದೆ. ಎರಡೂ ಕ್ಷೇತ್ರಗಳಲ್ಲಿ ವಾರಸುದಾರರಿಗೆ ಆದ್ಯತೆ ನೀಡುವ ಮೂಲಕ ಕಾಂಗ್ರೆಸ್ ತನ್ನ ಭದ್ರಕೋಟೆಯನ್ನು ಉಳಿಸಿಕೊಳ್ಳಲು ಮುಂದಾಗಿದೆ.
ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಟಿಕೆಟ್ ಹಂಚಿಕೆ ಪ್ರಕ್ರಿಯೆಯು ಸಾಕಷ್ಟು ಕುತೂಹಲ ಮತ್ತು ಸಂಘರ್ಷಕ್ಕೆ ಕಾರಣವಾಗಿತ್ತು. ಕ್ಷೇತ್ರದ ಪ್ರಭಾವಿ ಮುಸ್ಲಿಂ ನಾಯಕರು ಈ ಬಾರಿ ಅಲ್ಪಸಂಖ್ಯಾತ ಸಮುದಾಯದವರಿಗೆ ಟಿಕೆಟ್ ನೀಡಬೇಕೆಂದು ತೀವ್ರ ಒತ್ತಡ ಹೇರಿದ್ದರು. ಈ ನಡುವೆ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಅವರ ಪುತ್ರ ಸಮರ್ಥ್ ಶಾಮನೂರು ಅವರು ಅಧಿಕೃತ ಘೋಷಣೆಗೂ ಮುನ್ನವೇ ನಾಮಪತ್ರ ಸಲ್ಲಿಕೆ ಮಾಡಿದ್ದು ಅಲ್ಪಸಂಖ್ಯಾತ ನಾಯಕರ ಅಸಮಾಧಾನಕ್ಕೆ ಕಾರಣವಾಗಿತ್ತು. ಪಕ್ಷದ ಒಳಗಿನ ಈ ಮುಸುಕಿನ ಗುದ್ದಾಟವನ್ನು ಶಮನಗೊಳಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್ ಮತ್ತು ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಅವರು ಶನಿವಾರ ತಡರಾತ್ರಿ ಅಲ್ಪಸಂಖ್ಯಾತ ಮುಖಂಡರೊಂದಿಗೆ ಸುದೀರ್ಘ ಸಭೆ ನಡೆಸಿದ್ದರು.
ಸರಣಿ ಸಭೆಗಳ ನಂತರ ಅಲ್ಪಸಂಖ್ಯಾತ ನಾಯಕರ ಮನವೊಲಿಸುವಲ್ಲಿ ಹೈಕಮಾಂಡ್ ಯಶಸ್ವಿಯಾಗಿದೆ. ಮುಂದಿನ ದಿನಗಳಲ್ಲಿ ಅಲ್ಪಸಂಖ್ಯಾತ ಸಮುದಾಯಕ್ಕೆ ರಾಜಕೀಯವಾಗಿ ಸೂಕ್ತ ಪ್ರಾತಿನಿಧ್ಯ ನೀಡುವ ಭರವಸೆಯ ಮೇರೆಗೆ ಮುಸ್ಲಿಂ ನಾಯಕರು ಸಮರ್ಥ್ ಶಾಮನೂರು ಅವರಿಗೆ ಬೆಂಬಲ ನೀಡಲು ಒಪ್ಪಿಗೆ ಸೂಚಿಸಿದರು. ಇದರಿಂದಾಗಿ ದಾವಣಗೆರೆಯಲ್ಲಿ ಎದುರಾಗಿದ್ದ ಬಂಡಾಯದ ಭೀತಿ ಸದ್ಯಕ್ಕೆ ದೂರಾದಂತಾಗಿದ್ದು, ಶಾಮನೂರು ಕುಟುಂಬದ ಮೂರನೇ ತಲೆಮಾರಿನ ನಾಯಕ ಅಧಿಕೃತವಾಗಿ ಅಖಾಡಕ್ಕೆ ಇಳಿದಿದ್ದಾರೆ.
ಇತ್ತ ಬಾಗಲಕೋಟೆ ಕ್ಷೇತ್ರದಲ್ಲಿಯೂ ಕುಟುಂಬದ ಸದಸ್ಯರ ನಡುವೆಯೇ ಟಿಕೆಟ್ಗಾಗಿ ಪೈಪೋಟಿ ಏರ್ಪಟ್ಟಿತ್ತು. ದಿವಂಗತ ಹೆಚ್.ವೈ. ಮೇಟಿ ಅವರ ಮಕ್ಕಳಾದ ಮಲ್ಲಿಕಾರ್ಜುನ ಮೇಟಿ, ಉಮೇಶ್ ಮೇಟಿ ಮತ್ತು ಪುತ್ರಿ ಮಹಾದೇವಿ ಮೇಟಿ ಆಕಾಂಕ್ಷಿಗಳಾಗಿದ್ದರು. ಅಂತಿಮವಾಗಿ ಕುಟುಂಬದ ಸದಸ್ಯರ ಜೊತೆ ಚರ್ಚಿಸಿದ ಮುಖ್ಯಮಂತ್ರಿಗಳು, ಕಿರಿಯ ಪುತ್ರ ಉಮೇಶ್ ಮೇಟಿ ಅವರನ್ನು ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಿದ್ದಾರೆ. ಏಪ್ರಿಲ್ 9 ರಂದು ಚುನಾವಣೆ ನಡೆಯಲಿದ್ದು, ಈ ಇಬ್ಬರೂ ಅಭ್ಯರ್ಥಿಗಳು ಸೋಮವಾರ ತಮ್ಮ ನಾಮಪತ್ರಗಳನ್ನು ಸಲ್ಲಿಕೆ ಮಾಡಲಿದ್ದಾರೆ.




