
ಕೋಲಾರ: ಸಿಎನ್ಜಿ ಗ್ಯಾಸ್ ಕೊರತೆಯಿಂದ ಕೋಲಾರದಲ್ಲಿ ಆಟೋ ಚಾಲಕರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಗ್ಯಾಸ್ ಫಿಲ್ಲಿಂಗ್ ಸೆಂಟರ್ಗಳ ಮುಂದೆ ಕಿಲೋಮೀಟರ್ಗಳಷ್ಟು ಉದ್ದ ಸಾಲಿನಲ್ಲಿ ವಾಹನಗಳು ನಿಂತಿರುವ ದೃಶ್ಯ ಸಾಮಾನ್ಯವಾಗಿದ್ದು, ಚಾಲಕರು ದಿನಗೂಲಿ ಕಳೆದುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ.
ಸಿಎನ್ಜಿ ಅಭಾವದ ಹಿನ್ನೆಲೆ, ಬೈಪಾಸ್ ರಸ್ತೆಗಳಲ್ಲೂ ಉದ್ದ ಸಾಲುಗಳು ಕಂಡುಬರುತ್ತಿದ್ದು, ಗ್ಯಾಸ್ ಪಡೆಯಲು ಆಟೋ ಚಾಲಕರು ಗಂಟೆಗಳ ಕಾಲ ಕಾಯಬೇಕಾದ ಪರಿಸ್ಥಿತಿ ಉಂಟಾಗಿದೆ. “ಗ್ಯಾಸ್ ಇಲ್ಲದೆ ಆಟೋ ಓಡೋದಿಲ್ಲ, ಜೀವನ ಸಾಗೋದಿಲ್ಲ” ಎಂದು ಚಾಲಕರು ತಮ್ಮ ಅಸಮಾಧಾನ ಹೊರಹಾಕುತ್ತಿದ್ದಾರೆ.
ಅಮಾನುಲ್ಲಾ ಎಂಬ ಆಟೋ ಚಾಲಕ, “ಐದು ಹೆಣ್ಣು ಮಕ್ಕಳಿದ್ದಾರೆ. ಸಿಎನ್ಜಿ ಸಿಗದಿದ್ದರೆ ಕುಟುಂಬವನ್ನು ಹೇಗೆ ಸಾಗಿಸಲಿ?” ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
ಇನ್ನೂ ಕೆಲವು ಕಡೆ ಸಿಎನ್ಜಿ ಲಭ್ಯವಿದ್ದರೂ, ಅದರ ಬೆಲೆಯೂ ಹೆಚ್ಚಳವಾಗಿರುವುದು ಚಾಲಕರ ಆತಂಕವನ್ನು ಮತ್ತಷ್ಟು ಹೆಚ್ಚಿಸಿದೆ. ತೈಲ ಬಿಕ್ಕಟ್ಟು ಪರಿಣಾಮದಿಂದ ಈ ಪರಿಸ್ಥಿತಿ ಉಂಟಾಗಿದೆ ಎಂದು ಹೇಳಲಾಗುತ್ತಿದ್ದು, ಸಮಸ್ಯೆಗೆ ಶೀಘ್ರ ಪರಿಹಾರ ನೀಡುವಂತೆ ಚಾಲಕರು ಸರ್ಕಾರವನ್ನು ಒತ್ತಾಯಿಸುತ್ತಿದ್ದಾರೆ.
ಒಟ್ಟಿನಲ್ಲಿ, ಸಿಎನ್ಜಿ ಕೊರತೆ ಕೋಲಾರದಲ್ಲಿ ಆಟೋ ಚಾಲಕರ ಬದುಕಿನ ಮೇಲೆ ಗಂಭೀರ ಪರಿಣಾಮ ಬೀರಿದ್ದು, ತಕ್ಷಣದ ಕ್ರಮದ ಅಗತ್ಯತೆ ಎದುರಾಗಿದೆ.




