ಬಾಗಲಕೋಟೆ: ಶಿವಾಜಿ ಜಯಂತಿ ಮೆರವಣಿಗೆ ವೇಳೆ ನಡೆದ ಕಲ್ಲು ತೂರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿದ್ಧಾರ್ಥ್ ಗೋಯಲ್ ಮಹತ್ವದ ಮಾಹಿತಿ ಹಂಚಿಕೊಂಡಿದ್ದು, ಘಟನೆಯು ಪೂರ್ವ ಯೋಜಿತವಲ್ಲ ಹಾಗೂ ಡಿಜೆ ವಿಚಾರಕ್ಕೆ ಸಂಬಂಧಿಸಿದ್ದಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಬುಧವಾರ ಸಂಜೆ ಕೊತ್ತಲೇಶ್ವರ ದೇವಸ್ಥಾನದಿಂದ ಆರಂಭವಾದ ಮೆರವಣಿಗೆಯು ರಾತ್ರಿ 9.50ರ ಸುಮಾರಿಗೆ ಪಂಕಾ ಮಸೀದಿ ಬಳಿ ಬಂದಾಗ ಶಬ್ದದ ವಿಚಾರವಾಗಿ ಉಂಟಾದ ತಕರಾರು ಮತ್ತು ಪ್ರಚೋದನಾತ್ಮಕ ಮಾತುಗಳಿಂದ ಗಲಾಟೆ ಆರಂಭವಾಗಿದ್ದು, ರಾತ್ರಿ 10 ಗಂಟೆ ಸುಮಾರಿಗೆ ಮಸೀದಿಯ ಶೂ ರ್ಯಾಕ್‌ನಲ್ಲಿದ್ದ ಕಲ್ಲುಗಳನ್ನು ಬಳಸಿ ತೂರಾಟ ನಡೆಸಲಾಗಿದೆ. ಈ ಅಹಿತಕರ ಘಟನೆಯಲ್ಲಿ ಎಸ್‌ಪಿ ಸೇರಿದಂತೆ ಇಬ್ಬರು ಪೊಲೀಸರು ಹಾಗೂ ಓರ್ವ ಹಿಂದೂ ಕಾರ್ಯಕರ್ತ ಗಾಯಗೊಂಡಿದ್ದು, ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಮುಖ್ಯ ಆರೋಪಿ ತನ್ವೀರ್ ಸೇರಿದಂತೆ ಎಂಟು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.
ಘಟನೆಯ ನಂತರ ನಗರದ ತರಕಾರಿ ಮಾರುಕಟ್ಟೆಯಲ್ಲಿ ತಳ್ಳುಗಾಡಿಗಳಿಗೆ ಬೆಂಕಿ ಹಚ್ಚಿದ ಪ್ರಸಂಗವೂ ನಡೆದಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ಬಿಎನ್‌ಎಸ್ 163ರ ಅಡಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಪ್ರಕರಣದ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ರಾಜ್ಯಸಭಾ ಸದಸ್ಯ ನಾರಾಯಣಸಾ ಬಾಂಡಗೆ ಅವರು, ಕೇವಲ ಕೆಲವರನ್ನು ಬಂಧಿಸಿದರೆ ಸಾಲದು, ಘಟನೆಯಲ್ಲಿ ಭಾಗಿಯಾದ ಎಲ್ಲಾ ಕಿಡಿಗೇಡಿಗಳನ್ನು ಪತ್ತೆಹಚ್ಚಿ ಕಠಿಣ ಕಾನೂನು ಕ್ರಮ ಜರುಗಿಸಬೇಕೆಂದು ಆಗ್ರಹಿಸಿದ್ದಾರೆ.


