New delhiದೇಶ/ವಿದೇಶಸುದ್ದಿ

ಸಿಂಧನೂರು ನೂತನ ರೈಲ್ವೆ ಮಾರ್ಗದ ಅನುಮೋದನೆಗೆ ಮನವಿ

ನವದೆಹಲಿ: ಬಳ್ಳಾರಿ-ಸಿರುಗುಪ್ಪ-ಸಿಂಧನೂರು ಹಾಗೂ ಲಿಂಗಸುಗೂರು ರೈಲ್ವೆ ಮಾರ್ಗದ ಆರಂಭಕ್ಕೆ ಈ ಬಾರಿಯ ರೈಲ್ವೆ ಬಜೆಟ್‌ನಲ್ಲಿ ಮಂಜೂರಾತಿ ನೀಡುವಂತೆ ರೈಲ್ವೆ ಕ್ರಿಯಾ ಸಮಿತಿಯ ನಿಯೋಗವು ಕೇಂದ್ರ ಹಣಕಾಸು ಸಚಿವೆ ನಿರ್ಮಲ ಸೀತಾರಾಮನ್ ಅವರಿಗೆ ನವದೆಹಲಿಯಲ್ಲಿ ಮನವಿ ಸಲ್ಲಿಸಿದೆ. ಮೊದಲ ಹಂತದಲ್ಲಿ ಬಳ್ಳಾರಿಯಿಂದ ಸಿಂಧನೂರಿನವರೆಗೆ ಹೊಸ ಮಾರ್ಗ ನಿರ್ಮಾಣವಾದರೆ ಉಭಯ ನಗರಗಳ ನಡುವಿನ ಅಂತರ ಕೇವಲ 70 ಕಿ.ಮೀ ಆಗಲಿದ್ದು, ಇದು ಚಾಮರಾಜನಗರದಿಂದ ಬೀದರ್‌ವರೆಗೆ ಒಟ್ಟು 950 ಕಿ.ಮೀ ಉದ್ದದ ಕರ್ನಾಟಕದ ಸುದೀರ್ಘ ರೈಲ್ವೆ ಸಂಪರ್ಕ ಕಲ್ಪಿಸಲು ನೆರವಾಗಲಿದೆ ಎಂದು ನಿಯೋಗ ವಿವರಿಸಿದೆ. ಈ ಮಾರ್ಗದಿಂದ ಸಿರುಗುಪ್ಪ ಭಾಗದ ಉತ್ತಮ ತಳಿಯ ಅಕ್ಕಿಯನ್ನು ದೇಶದ ವಿವಿಧೆಡೆ ಸಾಗಿಸಲು ರೈತರಿಗೆ ಅನುಕೂಲವಾಗುವುದಲ್ಲದೆ, ರೈಲ್ವೆ ಇಲಾಖೆಗೆ ಗೂಡ್ಸ್ ಮೂಲಕ ಹೆಚ್ಚಿನ ಆದಾಯವೂ ಬರಲಿದೆ. ಇದರೊಂದಿಗೆ ಬಳ್ಳಾರಿ ಮಾರ್ಗದಲ್ಲಿ ವಂದೇ ಭಾರತ್ ಅಥವಾ ಜನಶತಾಬ್ದಿಯಂತಹ ಹೊಸ ರೈಲುಗಳನ್ನು ಆರಂಭಿಸಲು ಹಾಗೂ ಈ ಹಿಂದೆ ರದ್ದಾಗಿದ್ದ ಪ್ರಮುಖ ರೈಲುಗಳ ಸಂಚಾರವನ್ನು ಪುನರಾರಂಭಿಸಲು ಶಿಫಾರಸು ಮಾಡುವಂತೆ ಕೋರಲಾಗಿದೆ. ಇದಲ್ಲದೆ, ಐತಿಹಾಸಿಕ ಬಳ್ಳಾರಿಯ ಏಕಶಿಲಾ ಬೆಟ್ಟಕ್ಕೆ ವಿದ್ಯುತ್ ಚಾಲಿತ ಕೇಬಲ್ ಕಾರ್ ಸೌಲಭ್ಯ ಒದಗಿಸುವಂತೆಯೂ ಮನವಿ ಮಾಡಲಾಗಿದ್ದು, ಹಣಕಾಸು ಸಚಿವರು ಈ ಬಗ್ಗೆ ರೈಲ್ವೆ ಸಚಿವರೊಂದಿಗೆ ಚರ್ಚಿಸಿ ಸಕಾರಾತ್ಮಕವಾಗಿ ಸ್ಪಂದಿಸುವ ಭರವಸೆ ನೀಡಿದ್ದಾರೆ ಎಂದು ಕ್ರಿಯಾ ಸಮಿತಿಯ ಅಧ್ಯಕ್ಷ ಕೆ.ಎಂ. ಮಹೇಶ್ವರ ಸ್ವಾಮಿ ತಿಳಿಸಿದ್ದಾರೆ.

Comments (0)

Your email address will not be published. Required fields are marked *

Back to top button