ಬೆಂಗಳೂರು : ಆಸ್ತಿ ಆಸೆಗೆ ಹೆತ್ತ ತಂದೆಯನ್ನೇ ಇಬ್ಬರು ಮಕ್ಕಳು ಬಲಿ ಪಡೆದ ಆಘಾತಕಾರಿ ಘಟನೆಯೊಂದು ನಡೆದಿದೆ. ಸುಮಾರು 6 ಕೋಟಿ ರೂಪಾಯಿ ಮೌಲ್ಯದ ಆಸ್ತಿಗಾಗಿ ನಡೆದ ಈ ಜಗಳದಲ್ಲಿ ಬಿಎಂಟಿಸಿ ನಿವೃತ್ತ ಕಂಡಕ್ಟರ್ ಮುನಿಕೃಷ್ಣ ಅವರು ಸ್ವಂತ ಮಕ್ಕಳ ಕೈಯಲ್ಲೇ ಕೊಲೆಯಾಗಿದ್ದಾರೆ. ಈ ಘಟನೆ ಇಂದಿರಾನಗರದ ದೂಪನಹಳ್ಳಿಯಲ್ಲಿ ನಡೆದಿದೆ.

ಮುನಿಕೃಷ್ಣ ಅವರು ತಾವು ಕಷ್ಟಪಟ್ಟು ಸಂಪಾದಿಸಿದ್ದ ಮೂರು ಕಟ್ಟಡಗಳನ್ನು ತಮ್ಮ ಮಕ್ಕಳ ಹೆಸರಿಗೆ ಬರೆಯುವ ಬದಲು, ಮೊಮ್ಮಕ್ಕಳು ಮತ್ತು ಅಣ್ಣನ ಮಕ್ಕಳ ಹೆಸರಿಗೆ ‘ವಿಲ್’ ಮಾಡಿದ್ದರು. ಈ ವಿಚಾರವು ಮಕ್ಕಳಾದ ಮೋಹನ್ ಮತ್ತು ಗಜೇಂದ್ರ ಅವರ ಕೆಂಗಣ್ಣಿಗೆ ಗುರಿಯಾಗಿತ್ತು. ನಿಮ್ಮ ಆಸ್ತಿಯನ್ನು ನಮಗೆ ನೀಡದೆ ಅಣ್ಣನ ಮಕ್ಕಳಿಗೆ ಏಕೆ ಬರೆದಿದ್ದೀರಿ?ಎಂದು ಮಕ್ಕಳಿಬ್ಬರು ತಂದೆಯ ಜೊತೆ ಸದಾ ಜಗಳವಾಡುತ್ತಿದ್ದರು.
ಘಟನೆಯ ದಿನ ಕೂಡ ಇದೇ ವಿಚಾರವಾಗಿ ತಂದೆ-ಮಕ್ಕಳ ನಡುವೆ ದೊಡ್ಡ ಗಲಾಟೆ ನಡೆದಿದೆ. ಈ ವೇಳೆ ಮಕ್ಕಳು ತಂದೆಯ ಮೇಲೆ ಕಬ್ಬಿಣದ ರಾಡ್ ಮತ್ತು ಬ್ಯಾಟ್‌ನಿಂದ ಹಲ್ಲೆ ನಡೆಸಿದ್ದಾರೆ. ಆಗ ಮಕ್ಕಳನ್ನು ಹೆದರಿಸಲು ಮುನಿಕೃಷ್ಣ ಅವರು ಮನೆಯಲ್ಲಿದ್ದ ಚಾಕು ತಂದಿದ್ದಾರೆ. ಆದರೆ, ರೊಚ್ಚಿಗೆದ್ದ ಮಗ ಮೋಹನ್ ತಂದೆಯ ಕೈಯಲ್ಲಿದ್ದ ಚಾಕುವನ್ನೇ ಕಿತ್ತುಕೊಂಡು ಅವರಿಗೆ ಚುಚ್ಚಿ ಕೊಲೆ ಮಾಡಿದ್ದಾನೆ.
ಘಟನೆ ನಡೆದ ತಕ್ಷಣ ಇಂದಿರಾನಗರ ಪೊಲೀಸರು ಸ್ಥಳಕ್ಕೆ ಧಾವಿಸಿ ಹಿರಿಯ ಮಗ ಮೋಹನ್ ಕುಮಾರ್‌ನನ್ನು ಬಂಧಿಸಿದ್ದಾರೆ. ಮತ್ತೊಬ್ಬ ಮಗ ಗಜೇಂದ್ರ ಸದ್ಯ ತಲೆಮರೆಸಿಕೊಂಡಿದ್ದು, ಪೊಲೀಸರು ಆತನಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಆಸ್ತಿಗಾಗಿ ಹೆತ್ತ ತಂದೆಯನ್ನೇ ಕೊಂದ ಈ ಘಟನೆ ಬೆಂಗಳೂರು ಜನತೆಯನ್ನು ಬೆಚ್ಚಿಬೀಳಿಸಿದೆ.


