ಕ್ರೈಂ ಸ್ಟೋರಿಜಿಲ್ಲೆರಾಜ್ಯಸುದ್ದಿ

ಆಸ್ತಿ ಕಲಹಕ್ಕೆ ಭೀಕರ ಹತ್ಯೆ; ಕೊಲೆ ಮಾಡಿ ಶವ ಸುಟ್ಟ ಸಂಬಂಧಿಕರು!

ಹಾಸನ: ಆಲೂರು ತಾಲ್ಲೂಕಿನಲ್ಲಿ ಆಸ್ತಿ ಹಂಚಿಕೆಯ ಹಳೆಯ ದ್ವೇಷಕ್ಕೆ ಕೆಎಸ್‌ಆರ್‌ಟಿಸಿ ಚಾಲಕರೊಬ್ಬರನ್ನು ಭೀಕರವಾಗಿ ಹತ್ಯೆ ಮಾಡಿರುವ ಘಟನೆ ನಡೆದಿದೆ. ವೀರಪ್ಪ (58) ಅವರು ಹಾಸನ ಡಿಪೋದಲ್ಲಿ ಚಾಲಕರಾಗಿದ್ದು, ನಿವೃತ್ತಿಯ ಹೊಸ್ತಿಲಲ್ಲಿದ್ದರು. ಕೇವಲ ಎರಡು ಎಕರೆ ಜಮೀನಿನ ವಿವಾದಕ್ಕಾಗಿ ಕುಟುಂಬಸ್ಥರೇ ಸೇರಿ ಈ ಕೃತ್ಯ ಎಸಗಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ವೀರಪ್ಪನವರ ಚಿಕ್ಕಪ್ಪ ಬಾಗಲಯ್ಯ ಎಂಬುವವರು ತಮಗೆ ಸೇರಿದ 2 ಎಕರೆ ಆಸ್ತಿಯನ್ನು ವೀರಪ್ಪನ ಹೆಸರಿಗೆ ದಾನಪತ್ರದ ಮೂಲಕ ನೀಡಿದ್ದರು. ಆದರೆ, ಇದನ್ನು ವಿರೋಧಿಸಿ ಬಾಗಲಯ್ಯನವರ ಮಕ್ಕಳಾದ ಮಲ್ಲಮ್ಮ ಮತ್ತು ಮಹದೇವಮ್ಮ ನ್ಯಾಯಾಲಯದಲ್ಲಿ ದಾವೆ ಹೂಡಿದ್ದರು. ಆಲೂರು ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆಗೆ ಹಾಜರಾಗಿ ಹಿಂತಿರುಗುತ್ತಿದ್ದ ವೀರಪ್ಪ ಅವರನ್ನು ಜಮೀನಿನ ಬಳಿ ಹಿಂಬಾಲಿಸಿದ ಸಂಬಂಧಿಕರು, ಅವರ ಮೇಲೆ ಭೀಕರವಾಗಿ ಹಲ್ಲೆ ನಡೆಸಿ ಕೊಲೆ ಮಾಡಿದ್ದಾರೆ. ಅಷ್ಟೇ ಅಲ್ಲದೆ, ಸಾಕ್ಷ್ಯ ನಾಶಪಡಿಸುವ ಉದ್ದೇಶದಿಂದ ಮೃತದೇಹಕ್ಕೆ ಪೆಟ್ರೋಲ್ ಸುರಿದು ಸುಟ್ಟು ಹಾಕಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ವೀರಪ್ಪನ ಪುತ್ರ ವಿವೇಕ್ ನೀಡಿದ ದೂರಿನ ಮೇರೆಗೆ ಆಲೂರು ಪೊಲೀಸ್ ಠಾಣೆಯಲ್ಲಿ 11 ಜನರ ವಿರುದ್ಧ ಕೊಲೆ ಪ್ರಕರಣ ದಾಖಲಾಗಿದೆ. ಪ್ರಮುಖವಾಗಿ ಮಲ್ಲಮ್ಮ, ಮಹದೇವಮ್ಮ ಹಾಗೂ ಅವರ ಮಕ್ಕಳಾದ ಹರೀಶ್, ಪ್ರಕಾಶ್ ಮತ್ತು ಮಹದೇವ್ ಸೇರಿದಂತೆ ಇತರರ ವಿರುದ್ಧ ತನಿಖೆ ನಡೆಯುತ್ತಿದೆ. ಹಾಸನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶುಭಾ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಆರೋಪಿಗಳ ಪತ್ತೆಗಾಗಿ ಪೊಲೀಸರು ಜಾಲ ಬೀಸಿದ್ದಾರೆ.

Comments (0)

Your email address will not be published. Required fields are marked *

Back to top button