ಜಿಲ್ಲೆರಾಜ್ಯಸುದ್ದಿ

ಮದುವೆ ಮನೆ ಸೇರಬೇಕಿದ್ದ ದೀಪ್ತಿ ಚಿತೆ ಸೇರಿದ್ದೇ ವಿಧಿಯ ಆಟ!

ಮಂಗಳೂರು : ನಂತೂರು ವೃತ್ತದ ಬಳಿ ಖಾಸಗಿ ಬಸ್‌ಗಳ ಅತಿವೇಗ ಮತ್ತು ನಿರ್ಲಕ್ಷ್ಯಕ್ಕೆ ಮತ್ತೊಂದು ಬಲಿಯಾಗಿದ್ದು, ೨೬ ವರ್ಷದ ಯುವತಿಯೊಬ್ಬರು ಭೀಕರ ಅಪಘಾತದಲ್ಲಿ ಮೃತಪಟ್ಟಿದ್ದಾರೆ.

ಬಳ್ಳಾಲ್‌ಬಾಗ್ ನಿವಾಸಿ ದೀಪ್ತಿ ಎಂಬವರೇ ಮೃತ ದುರ್ದೈವಿ. ವಿವಾಹ ನಿಶ್ಚಯವಾಗಿದ್ದ ದೀಪ್ತಿ, ತನ್ನ ಭಾವಿ ಪತಿಯೊಂದಿಗೆ ಬರ್ತ್‌ಡೇ ಪಾರ್ಟಿಗೆಂದು ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದಾಗ ಕುಡುಪು ಕಡೆಗೆ ಹೋಗುತ್ತಿದ್ದ ೨೨ನೇ ನಂಬರ್‌ನ ಖಾಸಗಿ ಬಸ್ ಇವರ ವಾಹನಕ್ಕೆ ಡಿಕ್ಕಿ ಹೊಡೆದಿದೆ.

ಅಪಘಾತದ ಭೀಕರತೆಗೆ ದೀಪ್ತಿ ರಸ್ತೆಗೆ ಬಿದ್ದಾಗ ಬಸ್ಸಿನ ಚಕ್ರ ಅವರ ಹೊಟ್ಟೆಯ ಮೇಲೆ ಹರಿದಿದ್ದು, ಆಸ್ಪತ್ರೆಗೆ ಸಾಗಿಸುವ ದಾರಿಯಲ್ಲೇ ಅವರು ಕೊನೆಯುಸಿರೆಳೆದಿದ್ದಾರೆ. ಅದೃಷ್ಟವಶಾತ್ ದೀಪ್ತಿ ಅವರ ಭಾವಿ ಪತಿ ಅಪಾಯದಿಂದ ಪಾರಾಗಿದ್ದಾರೆ. ಈ ಘಟನೆಯಿಂದ ರೊಚ್ಚಿಗೆದ್ದ ಸಂಬಂಧಿಕರು ಮತ್ತು ಸಾರ್ವಜನಿಕರು, ಮಂಗಳೂರಿನಲ್ಲಿ ಖಾಸಗಿ ಬಸ್‌ಗಳ ಆರ್ಭಟ ಮಿತಿಮೀರಿದೆ ಎಂದು ಆರೋಪಿಸಿ ಆ್ಯಂಬುಲೆನ್ಸ್‌ನಲ್ಲಿದ್ದ ಮೃತದೇಹದೊಂದಿಗೆ ಕದ್ರಿ ಸಂಚಾರಿ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದ್ದಾರೆ.

ಮಂಗಳೂರಿನ ಸಂಚಾರ ವ್ಯವಸ್ಥೆಯಲ್ಲಿ ಖಾಸಗಿ ಬಸ್ ಚಾಲಕರು ನಿಯಮಗಳನ್ನು ಗಾಳಿಗೆ ತೂರುತ್ತಿದ್ದು, ಅಮಾಯಕ ಜೀವಗಳು ಬಲಿಯಾಗುತ್ತಿವೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೂಡಲೇ ನಿರ್ಲಕ್ಷ್ಯದ ಚಾಲನೆ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಮತ್ತು ನಂತೂರು ವೃತ್ತದಂತಹ ಅಪಾಯಕಾರಿ ಸ್ಥಳಗಳಲ್ಲಿ ಸೂಕ್ತ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

Comments (0)

Your email address will not be published. Required fields are marked *

Back to top button