ಬೆಂಗಳೂರು: ಬಾಗಲಗುಂಟೆಯಲ್ಲಿ ಜ್ಯೋತಿಷಿಯೊಬ್ಬರ ಭವಿಷ್ಯವಾಣಿಗೆ ಹೆದರಿ ಯುವತಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವರದಿಯಾಗಿದೆ.
ಎಂಇಐ ಲೇಔಟ್ ನಿವಾಸಿಯಾದ 29 ವರ್ಷದ ವಿದ್ಯಾಜ್ಯೋತಿ ಎಂಬಾಕೆ ನೇಣು ಬಿಗಿದುಕೊಂಡು ಪ್ರಾಣ ಕಳೆದುಕೊಂಡ ದುರ್ದೈವಿ. ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಈಕೆ, ಜ್ಯೋತಿಷಿಯೊಬ್ಬರು “ನೀನು ಅಲ್ಪಾಯುಷಿ” ಎಂದು ನುಡಿದಿದ್ದ ಭವಿಷ್ಯದಿಂದ ತೀವ್ರ ಆತಂಕಕ್ಕೆ ಒಳಗಾಗಿದ್ದಳು ಎನ್ನಲಾಗಿದೆ. ಮಗಳ ಜೀವಕ್ಕೆ ಆಪತ್ತು ಬರಬಾರದೆಂಬ ಉದ್ದೇಶದಿಂದ ಪೋಷಕರು ಆಕೆಯ ಇಷ್ಟದಂತೆ ಕೊಡಗು ಮೂಲದ ಯುವಕನೊಂದಿಗೆ ಮದುವೆ ಮಾಡಲು ಒಪ್ಪಿಗೆ ನೀಡಿದ್ದರಲ್ಲದೆ, ಜ್ಯೋತಿಷಿ ಸೂಚಿಸಿದಂತೆ ಮನೆಯಲ್ಲಿ ಒಂಬತ್ತು ದಿನಗಳ ಕಾಲ ವಿಶೇಷ ಪೂಜೆಯನ್ನು ಕೂಡ ಹಮ್ಮಿಕೊಂಡಿದ್ದರು.
ಘಟನೆಯ ದಿನ ಜ್ಯೋತಿಷಿಯ ಸೂಚನೆಯಂತೆ ಪೂಜೆಯ ಕೊನೆಯ ದಿನವಾಗಿದ್ದು, ಮಾರಮ್ಮ ದೇವರಿಗೆ ತಾಳಿ ಅರ್ಪಿಸುವ ಸಿದ್ಧತೆಗಳು ನಡೆಯುತ್ತಿದ್ದವು. ಮಧ್ಯಾಹ್ನ ಊಟದ ನಂತರ ತನ್ನ ಕೋಣೆಗೆ ತೆರಳಿದ್ದ ವಿದ್ಯಾಜ್ಯೋತಿ ಸಂಜೆಯಾದರೂ ಹೊರಬರಲಿಲ್ಲ. ಕೆಲಸದ ಒತ್ತಡದಲ್ಲಿರಬಹುದು ಎಂದು ಮನೆಯವರು ಭಾವಿಸಿದ್ದರು, ಆದರೆ ರಾತ್ರಿ 8 ಗಂಟೆ ಸುಮಾರಿಗೆ ದೇವಸ್ಥಾನಕ್ಕೆ ಹೋಗಲು ತಾಯಿ ಆಕೆಯನ್ನು ಕರೆಯಲು ಹೋದಾಗ ಬಾಗಿಲು ಒಳಗಿನಿಂದ ಲಾಕ್ ಆಗಿರುವುದು ಕಂಡುಬಂದಿದೆ. ಅನುಮಾನಗೊಂಡು ಕಿಟಕಿಯ ಮೂಲಕ ನೋಡಿದಾಗ ವಿದ್ಯಾ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.ಬಾಗಲಗುಂಟೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಿದ್ದಾರೆ.


