ಇರಾನ್ ಮತ್ತು ಇಸ್ರೇಲ್ ನಡುವಿನ ಭೀಕರ ಯುದ್ಧವು ಕೇವಲ ರಾಜತಾಂತ್ರಿಕ ಬಿಕ್ಕಟ್ಟು ಮಾತ್ರವಲ್ಲದೆ, ಭಾರತದ ಆರ್ಥಿಕತೆಯ ಮೇಲೆ “ಯುದ್ಧದ ಕಾರ್ಮೋಡ” ಕವಿಯುವಂತೆ ಮಾಡಿದೆ. ಭಾರತದ ‘ಅನ್ನದ ಬಟ್ಟಲು’ ಎಂದೇ ಕರೆಯಲ್ಪಡುವ ಕೃಷಿ ರಫ್ತು ಕ್ಷೇತ್ರಕ್ಕೆ ಈ ಸಂಘರ್ಷದಿಂದ ದೊಡ್ಡ ಪೆಟ್ಟು ಬೀಳುವ ಭೀತಿ ಎದುರಾಗಿದೆ. ಸುಮಾರು 50 ಸಾವಿರ ಕೋಟಿ ರೂಪಾಯಿ ಮೌಲ್ಯದ ಅಕ್ಕಿ ರಫ್ತಿಗೆ ಈಗ ಬಿಗ್ ಬ್ರೇಕ್ ಬೀಳುವ ಸಾಧ್ಯತೆಯಿದ್ದು, ರಫ್ತುದಾರರು ಅಕ್ಷರಶಃ ತಲೆಮೇಲೆ ಕೈಹೊತ್ತು ಕುಳಿತುಕೊಳ್ಳುವಂತಾಗಿದೆ.
ಭಾರತವು ಸೌದಿ ಅರೇಬಿಯಾ, ಇರಾನ್, ಇರಾಕ್, ಯುಎಇ ಮತ್ತು ಯೆಮೆನ್‌ನಂತಹ ಗಲ್ಫ್ ರಾಷ್ಟ್ರಗಳಿಗೆ ಹಾಗೂ ಅಫ್ಘಾನಿಸ್ತಾನಕ್ಕೆ ದೊಡ್ಡ ಪ್ರಮಾಣದಲ್ಲಿ ಅಕ್ಕಿಯನ್ನು ರವಾನಿಸುತ್ತದೆ. ಆದರೆ ಯುದ್ಧದ ಉದ್ವಿಗ್ನತೆಯಿಂದಾಗಿ ಸಮುದ್ರ ಮಾರ್ಗಗಳಲ್ಲಿ ಹಡಗುಗಳ ಸಂಚಾರ ದುಬಾರಿಯಾಗಿದೆ. ಹಡಗುಗಳ ಇಂಧನ ಬೆಲೆ ದಿಢೀರ್ ಏರಿಕೆಯಾಗಿದ್ದು, ಇದರ ಜೊತೆಗೆ ವಿಮೆ ಮತ್ತು ಕಂಟೇನರ್ ಬಾಡಿಗೆ ಕೂಡ ಗಗನಕ್ಕೇರಲಿದೆ. ಇದರಿಂದಾಗಿ ರಫ್ತು ಮಾಡಲಾದ ಅಕ್ಕಿಯ ದರಗಳು ಜಾಗತಿಕ ಮಾರುಕಟ್ಟೆಯಲ್ಲಿ ದುಬಾರಿಯಾಗಲಿವೆ.
ಮತ್ತೊಂದೆಡೆ, ಭಾರತದ ಸಾಮಾನ್ಯ ಜನರ ಜೇಬಿಗೆ ಕತ್ತರಿ ಬೀಳುವ ಸಾಧ್ಯತೆಯಿದೆ. ಮಧ್ಯಪ್ರಾಚ್ಯದ ಉದ್ವಿಗ್ನತೆಯಿಂದಾಗಿ ಈಗಾಗಲೇ ಕಚ್ಚಾ ತೈಲದ ಬೆಲೆ ಶೇಕಡಾ 10% ರಷ್ಟು ಏರಿಕೆಯಾಗಿದೆ. ಒಂದು ವೇಳೆ ಯುದ್ಧ ತೀವ್ರಗೊಂಡು ಇರಾನ್ ನಿಯಂತ್ರಣದಲ್ಲಿರುವ ಹಾರ್ಮುಜ್ ಜಲಸಂ ಮೂಲಕ ತೈಲ ಪೂರೈಕೆ ಸ್ಥಗಿತಗೊಂಡರೆ, ಪ್ರತಿ ಬ್ಯಾರೆಲ್ ಕಚ್ಚಾ ತೈಲದ ಬೆಲೆ 120 ಡಾಲರ್ ದಾಟಬಹುದು ಎಂದು ಅಂದಾಜಿಸಲಾಗಿದೆ.
ಭಾರತವು ತನ್ನ ಅಗತ್ಯದ ಶೇಕಡಾ 85% ಕ್ಕಿಂತ ಹೆಚ್ಚು ಕಚ್ಚಾ ತೈಲವನ್ನು ಆಮದು ಮಾಡಿಕೊಳ್ಳುತ್ತದೆ. ಒಂದು ವೇಳೆ ತೈಲ ಪೂರೈಕೆ ಮೊಟಕುಗೊಂಡರೆ, ಭಾರತದಲ್ಲಿ ಒಂದು ಲೀಟರ್ ಪೆಟ್ರೋಲ್ ಬೆಲೆ ₹200 ತಲುಪುತ್ತಾ ಎಂಬ ಆತಂಕ ಮನೆಮಾಡಿದೆ. ತೈಲ ಬೆಲೆ ಏರಿಕೆಯಾದರೆ ಸಾರಿಗೆ ವೆಚ್ಚ ಹೆಚ್ಚಾಗಿ, ದಿನಬಳಕೆಯ ವಸ್ತುಗಳ ಬೆಲೆಗಳು ಕೂಡ ಗಗನಕ್ಕೇರಲಿವೆ. ಹಾರ್ಮುಜ್ ಜಲಸಂಧಿಯು ಈಗ ಜಾಗತಿಕ ತೈಲ ಪೂರೈಕೆಯ ಆತಂಕದ ಕೇಂದ್ರಬಿಂದುವಾಗಿದ್ದು, ಭಾರತದ ಆರ್ಥಿಕ ಸ್ಥಿರತೆಗೆ ಇದು ದೊಡ್ಡ ಸವಾಲಾಗಿ ಪರಿಣಮಿಸಿದೆ.


