ಹಿರಿಯ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಅವರ ಮಹತ್ವಾಕಾಂಕ್ಷೆಯ ಚಿತ್ರ ‘ವೀರ ಕಂಬಳ’ದ ಟ್ರೈಲರ್ ಅದ್ದೂರಿಯಾಗಿ ಬಿಡುಗಡೆಯಾಗಿದ್ದು, ತುಳುನಾಡಿನ ಸಾಂಸ್ಕೃತಿಕ ಹಿರಿಮೆಯನ್ನು ಬೆಳ್ಳಿತೆರೆಯ ಮೇಲೆ ಅನಾವರಣಗೊಳಿಸಲು ಚಿತ್ರತಂಡ ಸಜ್ಜಾಗಿದೆ. ಸಾವಿರಾರು ವರ್ಷಗಳ ಇತಿಹಾಸವಿರುವ ಕಂಬಳದ ಕ್ರೀಡೆಯನ್ನು ಆಧರಿಸಿದ ಈ ಚಿತ್ರದ ಕನ್ನಡ ಮತ್ತು ತುಳು ಆವೃತ್ತಿಗಳ ಟ್ರೈಲರ್ ಅನ್ನು ನಾದಬ್ರಹ್ಮ ಹಂಸಲೇಖ ಅವರು ಬಿಡುಗಡೆಗೊಳಿಸಿ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ. ಕಲೆ ಎಂಬುದು ಮನುಷ್ಯನನ್ನು ಸದಾ ಜೀವಂತಿಕೆಯಿಂದ ಇರಿಸುತ್ತದೆ ಎಂದು ಬಣ್ಣಿಸಿದ ಹಂಸಲೇಖ ಅವರು, ಈ ಸಿನಿಮಾ ತುಳುನಾಡಿನ ಮಣ್ಣಿನ ಘಮಲನ್ನು ಜಗತ್ತಿಗೆ ಪಸರಿಸಲಿ ಎಂದು ಆಶಿಸಿದ್ದಾರೆ.

ದಶಕಗಳ ಕಾಲ ಶ್ರಮವಹಿಸಿ ಈ ಚಿತ್ರವನ್ನು ಸಿದ್ಧಪಡಿಸಿರುವ ರಾಜೇಂದ್ರ ಸಿಂಗ್ ಬಾಬು , ಕಂಬಳದ ಸುತ್ತ ಹೆಣೆಯಲಾದ ರೋಚಕ ಕಥಾಹಂದರವನ್ನು ಈ ಸಿನಿಮಾದಲ್ಲಿ ಕಟ್ಟಿಕೊಟ್ಟಿದ್ದಾರೆ. ವಿಶೇಷವಾಗಿ ಕಂಬಳದ ಕ್ರೀಡೆಗೂ ಮತ್ತು ಮುಂಬೈ ಭೂಗತ ಜಗತ್ತಿಗೂ ಇರುವ ನಿಗೂಢ ನಂಟಿನ ಎಳೆಯನ್ನು ಈ ಚಿತ್ರದಲ್ಲಿ ಬಳಸಿಕೊಳ್ಳಲಾಗಿದೆ ಎಂಬ ಕುತೂಹಲಕಾರಿ ಅಂಶವನ್ನು ಹಂಚಿಕೊಂಡಿದ್ದಾರೆ. ತುಳು ರಂಗಭೂಮಿಯ ದಿಗ್ಗಜರು ಮತ್ತು ತಾಂತ್ರಿಕ ವರ್ಗದವರ ಸಹಕಾರದಿಂದ ಮೂಡಿಬಂದಿರುವ ಈ ಸಿನಿಮಾ, ಕರಾವಳಿಯ ಸಂಪ್ರದಾಯವನ್ನು ಅತ್ಯಂತ ನೈಜವಾಗಿ ಚಿತ್ರೀಕರಿಸುವಲ್ಲಿ ಯಶಸ್ವಿಯಾಗಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
‘ಬಾಬಾಸ್ ಬ್ಲೆಸಿಂಗ್ ಫಿಲ್ಮ್ಸ್’ ಬ್ಯಾನರ್ ಅಡಿಯಲ್ಲಿ ಡಾ. ವಿನಿತ ವಿಜಯ್ ಕುಮಾರ್ ರೆಡ್ಡಿ ಮತ್ತು ಅರುಣ್ ರೈ ತೊಡಾರ್ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಚಿತ್ರದಲ್ಲಿ ಆದಿತ್ಯ, ಪ್ರಕಾಶ್ ರೈ ಮತ್ತು ರವಿಶಂಕರ್ ಅವರಂತಹ ಅನುಭವಿ ನಟರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರೆ, ರಾಧಿಕಾ ನಾರಾಯಣ್ ವಿಶೇಷ ಪಾತ್ರವೊಂದಕ್ಕೆ ಜೀವ ತುಂಬಿದ್ದಾರೆ. ನವೀನ್ ಪಡೀಲ್, ಭೋಜರಾಜ್ ವಾಮಂಜೂರು ಸೇರಿದಂತೆ ತುಳು ಚಿತ್ರರಂಗದ ಖ್ಯಾತ ಕಲಾವಿದರು ಅಭಿನಯಿಸಿರುವ ಈ ಚಿತ್ರಕ್ಕೆ ಮಣಿಕಾಂತ್ ಕದ್ರಿ ಅವರ ಸಂಗೀತ ಮತ್ತು ಆರ್.ಗಿರಿ ಅವರ ಛಾಯಾಗ್ರಹಣವಿದೆ.

ಕರಾವಳಿ ಸಂಸ್ಕೃತಿಯ ಈ ಅದ್ಧೂರಿ ದೃಶ್ಯಕಾವ್ಯವು ಫೆಬ್ರವರಿ 27ರಂದು ರಾಜ್ಯಾದ್ಯಂತ ತೆರೆಕಾಣಲಿದ್ದು, ಸಿನಿಮಾ ಪ್ರೇಮಿಗಳಲ್ಲಿ ಈಗಾಗಲೇ ದೊಡ್ಡ ಮಟ್ಟದ ನಿರೀಕ್ಷೆ ಮೂಡಿಸಿದೆ. ಹಂಸಲೇಖ ಅವರ ಮಾರ್ಗದರ್ಶನ ಮತ್ತು ರಾಜೇಂದ್ರ ಸಿಂಗ್ ಬಾಬು ಅವರ ಅನುಭವಿ ನಿರ್ದೇಶನವು ಈ ಚಿತ್ರಕ್ಕೆ ಆನೆಯ ಬಲ ತಂದಿದೆ. ಕಂಬಳದ ಕಣದಲ್ಲಿ ಓಡುವ ಕೋಣಗಳ ವೇಗ ಮತ್ತು ಅದರ ಹಿಂದಿರುವ ಭಾವನಾತ್ಮಕ ಕಥೆಗಳನ್ನು ಕಣ್ತುಂಬಿಕೊಳ್ಳಲು ಪ್ರೇಕ್ಷಕರು ಕಾತರದಿಂದ ಕಾಯುತ್ತಿದ್ದಾರೆ.


