#Exclusive NewsTop Newsರಾಜಕೀಯರಾಜ್ಯವೈರಲ್ ನ್ಯೂಸ್ಸುದ್ದಿ

ರಾಜ್ಯ ಕಾಂಗ್ರೆಸ್‌ನಲ್ಲಿ ‘ಪರಮ’ ಸಂಚಲನ; ದೆಹಲಿಯಲ್ಲಿ ದಲಿತ ಸಿಎಂ ಸ್ಕ್ರಿಪ್ಟ್ ರೆಡಿ!

ರಾಜ್ಯ ರಾಜಕಾರಣದ ನಡುಮನೆಯಲ್ಲಿ ಈಗ ಅತ್ಯಂತ ಸ್ಫೋಟಕ ಸುದ್ದಿಯೊಂದು ಹರಿದಾಡುತ್ತಿದ್ದು, ದೆಹಲಿ ಮಟ್ಟದಲ್ಲಿ ನಡೆದ ಗೃಹ ಸಚಿವ ಜಿ. ಪರಮೇಶ್ವರ್ ಮತ್ತು ಮಲ್ಲಿಕಾರ್ಜುನ ಖರ್ಗೆ ಅವರ ಮಾತುಕತೆ ಭಾರೀ ಯಶಸ್ವಿಯಾಗಿದ್ದು, ಕರ್ನಾಟಕದ ಸಚಿವ ಸಂಪುಟ ಮತ್ತು ಮುಖ್ಯಮಂತ್ರಿ ಕುರ್ಚಿಯ ಲೆಕ್ಕಾಚಾರದಲ್ಲಿ ನಿರ್ಣಾಯಕ ತಿರುವು ಕಾಣಿಸಿಕೊಳ್ಳುವ ಮುನ್ಸೂಚನೆ ಸಿಕ್ಕಿದೆ.

ಒಳಮೀಸಲಾತಿ ಕಿಚ್ಚು ಆರಿಸಲು ಹೈಕಮಾಂಡ್ ಈಗ ‘ಹೈ-ವೋಲ್ಟೇಜ್ ಪ್ಲಾನ್’ ರೂಪಿಸಿದೆ. ಕನಕಪುರ ಬಂಡೆ ಡಿ.ಕೆ. ಶಿವಕುಮಾರ್ ಅವರಿಗಿಂತ ಮೊದಲೇ ಜಿ. ಪರಮೇಶ್ವರ್ ಅವರಿಗೆ ಪಟ್ಟಾಭಿಷೇಕ ಮಾಡುವ ಹೊಸ ಸಂಧಾನ ಸೂತ್ರ ಸಿದ್ಧವಾಗಿದೆ ಎನ್ನಲಾಗುತ್ತಿದೆ. ಮುಂದಿನ ಸಾರ್ವತ್ರಿಕ ಚುನಾವಣೆಯ ಸಾರಥ್ಯವನ್ನು ಡಿಕೆಶಿ ಅವರಿಗೆ ವಹಿಸಿ, ಚುನಾವಣೆಯಲ್ಲಿ ಗೆದ್ದರೆ ಪೂರ್ಣ 5 ವರ್ಷ ಅವರಿಗೆ ರಾಜ್ಯದ ಚುಕ್ಕಾಣಿ ನೀಡುವ ಭರವಸೆ ನೀಡಲಾಗಿದೆ. ಈ ಮಹತ್ವದ ಬೆಳವಣಿಗೆಗೆ ಸಿಎಂ ಸಿದ್ದರಾಮಯ್ಯ ಅವರು ಕೂಡ ಒಲವು ತೋರಿದ್ದಾರೆ ಎನ್ನುವುದು ಈಗ ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದೆ.

ದೆಹಲಿಯಲ್ಲಿ ತಯಾರಾಗಿರುವ ಈ ಹೊಸ ಪಾಲಿಟಿಕಲ್ ಸ್ಕ್ರಿಪ್ಟ್‌ನಂತೆ, ರಾಜ್ಯದಲ್ಲಿ ‘ದಲಿತ ಸಿಎಂ’ ಕನಸು ಈಡೇರುವ ಸಮಯ ಹತ್ತಿರವಾದಂತಿದೆ. ಪಂಜಾಬ್‌ನಲ್ಲಿ ಚರಣ್‌ಜಿತ್ ಸಿಂಗ್ ಚನ್ನಿ ಅಥವಾ ಮಹಾರಾಷ್ಟ್ರದ ಶಿಂಧೆ ಮಾಡೆಲ್ ಮಾದರಿಯಲ್ಲಿ, ಚುನಾವಣೆಗೂ ಮುನ್ನವೇ ದಲಿತ ನಾಯಕನಿಗೆ ಸಿಎಂ ಪಟ್ಟ ನೀಡಿ ದಲಿತ ಮತಗಳನ್ನು ಒಗ್ಗೂಡಿಸುವುದು ಕಾಂಗ್ರೆಸ್‌ನ ಬೃಹತ್ ರಣತಂತ್ರವಾಗಿದೆ. ದಶಕಗಳಿಂದ ಸಿಎಂ ಸ್ಥಾನಕ್ಕಾಗಿ ಕಾಯುತ್ತಿರುವ ದಲಿತ ಸಮುದಾಯಕ್ಕೆ ಈ ಮೂಲಕ ಹೈಕಮಾಂಡ್ ದೊಡ್ಡ ಉಡುಗೊರೆ ನೀಡಲು ಮುಂದಾಗಿದೆ.

ಸಿದ್ದರಾಮಯ್ಯ ಮತ್ತು ಖರ್ಗೆ ನಡುವಿನ ಸಂಧಾನ ಸೂತ್ರ ಯಶಸ್ವಿಯಾದರೆ, ಕರ್ನಾಟಕದ ರಾಜಕಾರಣದಲ್ಲಿ ಶೀಘ್ರದಲ್ಲೇ ದೊಡ್ಡ ಮಟ್ಟದ ಬದಲಾವಣೆಗಳಾಗಲಿವೆ. ಇದು ಬರೀ ವದಂತಿಯೋ ಅಥವಾ ಅಧಿಕೃತವಾಗಿ ಜಾರಿಯಾಗಲಿದೆಯೇ ಎಂಬ ಕುತೂಹಲಕ್ಕೆ ತೆರೆ ಬೀಳಲು ಕೆಲವೇ ದಿನಗಳು ಬಾಕಿ ಇವೆ. ಫ್ರೀಡಂ ಟಿವಿ ಬಿಚ್ಚಿಡುತ್ತಿರುವ ಈ ರಾಜಕೀಯ ಒಳಸುಳಿಯ ಸುದ್ದಿ ಸದ್ಯ ಕಾಂಗ್ರೆಸ್ ಕಾರ್ಯಕರ್ತರು ಮತ್ತು ವಿರೋಧ ಪಕ್ಷಗಳಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.

Comments (0)

Your email address will not be published. Required fields are marked *

Back to top button