ಮಂಡ್ಯ: ಗಣೇಶ ಮೂರ್ತಿ ವಿಸರ್ಜನಾ ಮೆರವಣಿಗೆಯಲ್ಲಿ ರಾಜ್ಯದ ಹಲವೆಡೆ ದುರಂತ ಸಂಭವಿಸಿದೆ. ಮೆರವಣಿಯಲ್ಲಿ ನೃತ್ಯ ಮಾಡುವ ವೇಳೆ ಇಬ್ಬರು ವ್ಯಕ್ತಿಗಳು ಹೃದಯಾಘಾತದಿಂದ ಸಾವನ್ನಪ್ಪಿರುವಂತಹ ಎರಡು ಪ್ರತ್ಯೇಕ ಘಟನೆಗಳು ಮಂಡ್ಯ ಮತ್ತು ಚಿಕ್ಕಬಳ್ಳಾಪುರದಲ್ಲಿ ನಡೆದಿದೆ.
ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಾಲೂಕಿನ ಜೊತ್ತನಪುರ ಗ್ರಾಮದಲ್ಲಿ ಗಣಪತಿ ವಿಸರ್ಜನಾ ಮೆರವಣಿಗೆ ವೇಳೆ ಹೃದಯಾಘಾತದಿಂದ 55 ವರ್ಷದ ಮಂಜುನಾಥ್ ಸಾವನ್ನಪ್ಪಿದ್ದಾರೆ.. ಗ್ರಾಮದಲ್ಲಿ ಗಣೇಶ ವಿಸರ್ಜನಾ ಮೆರವಣಿಗೆ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಯುವಕರ ಜೊತೆ ಡಿಜೆ ಹಾಡಿಗೆ ಮಂಜುನಾಥ್ ಭರ್ಜರಿ ಹೆಜ್ಜೆ ಹಾಕುತ್ತಿದ್ದರು. ಆದರೆ ಹಠಾತ್ ಹೃದಯಾಘಾತದಿಂದ ಕುಸಿದು ಬಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಇನ್ನು ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಬೋದಗೂರು ಗ್ರಾಮದಲ್ಲಿ ಕೂಡ ಗಣೇಶ ವಿಸರ್ಜನೆ ವೇಳೆ ಆಪ್ತಮಿತ್ರ ಚಿತ್ರದ ಸುಂದರ ವದನ ಹಾಡಿಗೆ ಮೈಮರೆತು ಕುಣಿಯುತ್ತಿದ್ದಾಗ 40 ವರ್ಷದ ಲಕ್ಷ್ಮಿಪತಿ ಎಂಬ ವ್ಯಕ್ತಿಗೆ ಹೃದಯಾಘಾತ ಉಂಟಾಗಿ ಮೃತಪಟ್ಟಿದ್ದಾರೆ. ಗಣೇಶ ವಿಸರ್ಜನೆ ಹಿನ್ನಲೆ ಗ್ರಾಮಸ್ಥರು ಡ್ಯಾನ್ಸ್ ಮಾಡುತ್ತಿದ್ದರು. ಲಕ್ಷ್ಮಿಪತಿ ಕೂಡ ಡ್ಯಾನ್ಸ್ ಮಾಡುತ್ತಿದ್ದು, ಹಠಾತ್ ಹೃದಯಾಘಾತ ಸಂಭವಿಸಿದ್ದು, ಕುಸಿದು ಬಿದ್ದು ಮೃತಪಟ್ಟಿದ್ದಾರೆ. ಲಕ್ಷ್ಮಿಪತಿ ಗ್ರಾಮದಲ್ಲಿ ಕೃಷಿ ಮಾಡಿಕೊಂಡು ಜೀವನ ನಡೆಸುತ್ತಿದ್ದರು. ಹೆಂಡತಿ ಮತ್ತು ಇಬ್ಬರು ಮಕ್ಕಳನ್ನು ಅಗಲಿದ್ದಾರೆ.