ಹಾಸನ: ನಗರದ ಕೈಗಾರಿಕಾ ಪ್ರದೇಶದಲ್ಲಿ ಜಾಲಿ ರೈಡ್‌ಗೆಂದು ಹೊರಟಿದ್ದ ಇಬ್ಬರು ಯುವತಿಯರ ಬದುಕು ದುರಂತ ಅಂತ್ಯ ಕಂಡಿದೆ. ಹಂಪ್ಸ್ ಗಮನಿಸದೆ ಬುಲೆಟ್ ಬೈಕ್‌ನಿಂದ ಬಿದ್ದ ಪರಿಣಾಮ ಎಂಸಿಎ ಅಂತಿಮ ವರ್ಷದ ವಿದ್ಯಾರ್ಥಿನಿ ಪ್ರಿಯಾ (23) ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದಾರೆ.
ಈ ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿರುವ ಮತ್ತೋರ್ವ ಯುವತಿ ಸ್ವಾತಿ (24) ಕಳೆದ ವರ್ಷವಷ್ಟೇ ಮದುವೆಯಾಗಿದ್ದು, ಸದ್ಯ ಅವರ ಸ್ಥಿತಿ ಚಿಂತಾಜನಕವಾಗಿದೆ. ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಇಬ್ಬರೂ ಯುವತಿಯರು ಹೆಲ್ಮೆಟ್ ಧರಿಸಿರಲಿಲ್ಲ,ವೇಗವಾಗಿ ಹೋಗುತ್ತಿದ್ದಾಗ ಹಂಪ್ಸ್ ಕಾಣದ ಕಾರಣ ಬೈಕ್ ನಿಯಂತ್ರಣ ತಪ್ಪಿ ಇಬ್ಬರೂ ರಸ್ತೆಗೆ ಅಪ್ಪಳಿಸಿದ್ದಾರೆ.
ಹಾಸನ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಯುವ ಜನತೆ ವಾಹನ ಚಲಾಯಿಸುವಾಗ ಸುರಕ್ಷತಾ ಕ್ರಮಗಳನ್ನು ಕಡೆಗಣಿಸುವುದು ಎಷ್ಟು ಅಪಾಯಕಾರಿ ಎಂಬುದಕ್ಕೆ ಈ ಘಟನೆ ಒಂದು ಕಟು ನಿದರ್ಶನವಾಗಿದೆ.


