Tuesday, March 3, 2026
20.2 C
Bengaluru
Google search engine
LIVE
ಮನೆಜಿಲ್ಲೆನಾಳೆ ವರ್ಷದ ಮೊದಲ ಚಂದ್ರಗ್ರಹಣ; ಪ್ರಮುಖ ದೇಗುಲಗಳ ದರ್ಶನ ಸಮಯ ಬದಲು!

ನಾಳೆ ವರ್ಷದ ಮೊದಲ ಚಂದ್ರಗ್ರಹಣ; ಪ್ರಮುಖ ದೇಗುಲಗಳ ದರ್ಶನ ಸಮಯ ಬದಲು!

ಮೊದಲ ಕೇತುಗ್ರಸ್ತ ಪೂರ್ಣ ಚಂದ್ರಗ್ರಹಣ ಸಂಭವಿಸುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದ ಪ್ರಸಿದ್ಧ ದೇವಾಲಯಗಳ ದರ್ಶನ ಸಮಯದಲ್ಲಿ ಭಾರಿ ಬದಲಾವಣೆ ಮಾಡಲಾಗಿದೆ. ಮಧ್ಯಾಹ್ನ 03:20ಕ್ಕೆ ಆರಂಭವಾಗಲಿರುವ ಈ ಗ್ರಹಣವು ಸಂಜೆ 06:47ಕ್ಕೆ ಮುಕ್ತಾಯಗೊಳ್ಳಲಿದ್ದು, ಈ ಅವಧಿಯಲ್ಲಿ ಬಹುತೇಕ ದೇವಸ್ಥಾನಗಳ ಬಾಗಿಲು ಮುಚ್ಚಿರಲಿವೆ. ಗ್ರಹಣ ಮುಕ್ತಾಯವಾದ ನಂತರವಷ್ಟೇ ದೇವಸ್ಥಾನಗಳನ್ನು ಶುದ್ಧೀಕರಿಸಿ ಭಕ್ತರಿಗೆ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುತ್ತದೆ. ಹಾಗಾಗಿ ದರ್ಶನಕ್ಕಾಗಿ ದೇವಸ್ಥಾನಕ್ಕೆ ಹೋಗುವ ಮುನ್ನ ಭಕ್ತರು ಪರಿಷ್ಕೃತ ಸಮಯವನ್ನು ಗಮನಿಸುವುದು ಅನಿವಾರ್ಯವಾಗಿದೆ.

ವಿಶ್ವಪ್ರಸಿದ್ಧ ತಿರುಪತಿ ತಿರುಮಲ ದೇವಸ್ಥಾನದಲ್ಲಿ ಗ್ರಹಣದ ಪ್ರಯುಕ್ತ ಸುಮಾರು 10 ಗಂಟೆಗಳ ಕಾಲ ದರ್ಶನವನ್ನು ಸ್ಥಗಿತಗೊಳಿಸಲಾಗಿದೆ. ನಾಳೆ ಬೆಳಿಗ್ಗೆ 9 ಗಂಟೆಯಿಂದ ರಾತ್ರಿ 7:30ರವರೆಗೆ ಶ್ರೀವಾರಿ ದರ್ಶನಕ್ಕೆ ಅವಕಾಶವಿರುವುದಿಲ್ಲ. ಗ್ರಹಣ ಮುಕ್ತಾಯವಾಗಿ ದೇಗುಲದ ಶುದ್ಧೀಕರಣ ಕಾರ್ಯಗಳು ಮುಗಿದ ನಂತರ ಅಂದರೆ ರಾತ್ರಿ 8 ಗಂಟೆಯ ಬಳಿಕವಷ್ಟೇ ಭಕ್ತರಿಗೆ ದೇವರ ದರ್ಶನ ಲಭ್ಯವಾಗಲಿದೆ ಎಂದು ತಿರುಮಲ ತಿರುಪತಿ ದೇವಸ್ಥಾನಂ ಮಂಡಳಿ ತಿಳಿಸಿದೆ.

ಧರ್ಮಸ್ಥಳದ ಶ್ರೀ ಮಂಜುನಾಥ ಸ್ವಾಮಿ ದೇವಸ್ಥಾನದಲ್ಲಿ ನಾಳೆ ಬೆಳಿಗ್ಗೆ 6:30ರಿಂದ ಮಧ್ಯಾಹ್ನ 1:30ರವರೆಗೆ ಮಾತ್ರ ಭಕ್ತರಿಗೆ ದರ್ಶನಕ್ಕೆ ಅವಕಾಶವಿರುತ್ತದೆ. ಮಧ್ಯಾಹ್ನದ ನಂತರ ಗ್ರಹಣ ಮುಕ್ತಾಯವಾಗುವವರೆಗೆ ದೇಗುಲದ ಬಾಗಿಲು ಮುಚ್ಚಲಿದ್ದು, ರಾತ್ರಿ 7:30ಕ್ಕೆ ಪುನಃ ದರ್ಶನ ಆರಂಭವಾಗಲಿದೆ. ಅದೇ ರೀತಿ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ನಾಳೆಯ ಎಲ್ಲಾ ವಿಶೇಷ ಸೇವೆಗಳನ್ನು ರದ್ದುಗೊಳಿಸಲಾಗಿದ್ದು, ಗ್ರಹಣ ಕಾಲದಲ್ಲಿ ಭಕ್ತರಿಗೆ ದರ್ಶನ ಲಭ್ಯವಿರುವುದಿಲ್ಲ.

ರಾಜಧಾನಿ ಬೆಂಗಳೂರಿನ ಪ್ರಸಿದ್ಧ ದೇವಾಲಯಗಳಾದ ಗವಿಗಂಗಾಧರೇಶ್ವರ, ಕಾಡು ಮಲ್ಲೇಶ್ವರ ಹಾಗೂ ದೊಡ್ಡ ಗಣೇಶ ದೇವಸ್ಥಾನಗಳಲ್ಲಿಯೂ ಪೂಜಾ ಸಮಯದಲ್ಲಿ ಬದಲಾವಣೆ ಮಾಡಲಾಗಿದೆ. ಮಧ್ಯಾಹ್ನದಿಂದ ಸಂಜೆಯವರೆಗೆ ಭಕ್ತರಿಗೆ ಪ್ರವೇಶವನ್ನು ನಿರ್ಬಂಧಿಸಲಾಗಿದ್ದು, ಬಹುತೇಕ ದೇವಸ್ಥಾನಗಳು ಬೆಳಿಗ್ಗೆ 9 ಗಂಟೆಯಿಂದಲೇ ಬಂದ್ ಆಗಲಿವೆ. ಗ್ರಹಣ ಶಾಂತಿ ಪೂಜೆ ಮತ್ತು ಶುದ್ಧೀಕರಣದ ನಂತರವಷ್ಟೇ ಸಂಜೆ ದರ್ಶನ ಪುನರಾರಂಭಗೊಳ್ಳಲಿದೆ.

RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments