ಸಿನಿಮಾ

ಈ ಸಲ ಯುದ್ಧನೇ ಬೇರೆ! ವೈಲೆಂಟ್ ಲುಕ್‌ನಲ್ಲಿ ಅಬ್ಬರಿಸಿದ ರಾಕಿಂಗ್ ಸ್ಟಾರ್ ಯಶ್

ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ‘ಟಾಕ್ಸಿಕ್’ ಚಿತ್ರದ ಸುನಾಮಿ ಈಗ ಅಬ್ಬರಿಸಲು ಶುರುವಾಗಿದೆ. ಇಂದು ಬಿಡುಗಡೆಯಾಗಿರುವ ಚಿತ್ರದ ಹೊಸ ಟೀಸರ್ ಸೋಶಿಯಲ್ ಮೀಡಿಯಾದಲ್ಲಿ ದೊಡ್ಡ ಮಟ್ಟದ ಹಲ್‌ಚಲ್ ಎಬ್ಬಿಸುತ್ತಿದೆ. ಈ ಹೊಸ ಝಲಕ್‌ನಲ್ಲಿ ಯಶ್ ಅವರು ‘ರಾಯ’ ಎಂಬ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಅವರ ರಾ ಮತ್ತು ವೈಲೆಂಟ್ ಲುಕ್ ಅಭಿಮಾನಿಗಳಲ್ಲಿ ರೋಮಾಂಚನ ಉಂಟುಮಾಡಿದೆ. ಟೀಸರ್ ನೋಡುಗರಿಗೆ ಈ ಬಾರಿ ಬಾಕ್ಸ್ ಆಫೀಸ್‌ನಲ್ಲಿ ಅಕ್ಷರಶಃ ಯುದ್ಧವೇ ನಡೆಯಲಿದೆ ಎಂಬ ಸ್ಪಷ್ಟ ಮುನ್ಸೂಚನೆ ಸಿಕ್ಕಂತಾಗಿದೆ.

ಮಾರ್ಚ್ 19ಕ್ಕೆ ತೆರೆಗೆ ಬರಲಿರುವ ಈ ಚಿತ್ರದ ಟೀಸರ್‌ನಲ್ಲಿ ಯಶ್ ಅವರ ದ್ವಿಪಾತ್ರದ ಕುರಿತು ಸಾಕಷ್ಟು ಕುತೂಹಲ ಮೂಡಿದೆ. ಯಶ್ ಅವರು ಸಖತ್ ವೈಲೆಂಟ್ ಅವತಾರದಲ್ಲಿ ಕಾಣಿಸಿಕೊಂಡಿರುವುದು ಮಾತ್ರವಲ್ಲದೆ, ಟೀಸರ್‌ನಾದ್ಯಂತ ರಕ್ತದ ಕೋಡಿ ಹರಿದಿರುವುದು ಚಿತ್ರದ ತೀವ್ರತೆಯನ್ನು ತೋರಿಸುತ್ತದೆ. ‘ಈ ಸಲ ಯುದ್ಧನೇ ಬೇರೆ’ ಹಾಗೂ ‘ಹಠ ಬಿಡೋ ಮಾತೇ ಇಲ್ಲ’ ಎಂಬ ಖಡಕ್ ಡೈಲಾಗ್‌ಗಳು ಈಗಾಗಲೇ ವೈರಲ್ ಆಗಿದ್ದು, ಇದು ಪ್ರಬಲ ಪೈಪೋಟಿ ನೀಡಲಿರುವ ‘ಧುರಂಧರ್ 2’ ಚಿತ್ರಕ್ಕೆ ನೀಡಿದ ನೇರ ಕೌಂಟರ್ ಎಂದೇ ಸಿನಿಪ್ರಿಯರು ಚರ್ಚಿಸುತ್ತಿದ್ದಾರೆ.

ಗೀತು ಮೋಹನ್‌ದಾಸ್ ನಿರ್ದೇಶನದ ಈ ಬೃಹತ್ ಚಿತ್ರಕ್ಕೆ ಕೆವಿಎನ್ ಪ್ರೊಡಕ್ಷನ್ಸ್ ಜೊತೆಗೆ ಸ್ವತಃ ಯಶ್ ಕೂಡ ಬಂಡವಾಳ ಹೂಡಿದ್ದಾರೆ. ಚಿತ್ರದಲ್ಲಿ ನಯನತಾರಾ, ಕಿಯಾರಾ ಅಡ್ವಾಣಿ ಹಾಗೂ ಹುಮಾ ಖುರೇಶಿಯಂತಹ ಘಟಾನುಘಟಿ ತಾರೆಯರು ಬಣ್ಣ ಹಚ್ಚಿದ್ದಾರೆ. ಈ ಹಿಂದೆ ಬಿಡುಗಡೆಯಾಗಿದ್ದ ಟೀಸರ್ ಕೆಲವು ವಿವಾದಗಳಿಗೆ ಈಡಾಗಿದ್ದರೂ, ಆ ಎಲ್ಲಾ ಅಡೆತಡೆಗಳನ್ನು ಮೀರಿ ಯೂಟ್ಯೂಬ್‌ನಲ್ಲಿ 100 ಮಿಲಿಯನ್‌ಗೂ ಅಧಿಕ ವೀಕ್ಷಣೆ ಕಂಡು ದಾಖಲೆ ಬರೆದಿತ್ತು. ಈಗ ಬಿಡುಗಡೆಯಾಗಿರುವ ಹೊಸ ಟೀಸರ್ ಕೂಡ ಅದೇ ಹಾದಿಯಲ್ಲಿ ಸಾಗುತ್ತಿದ್ದು, ಮಾರ್ಚ್ 19ರ ಬಿಡುಗಡೆಗೆ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.

Comments (0)

Your email address will not be published. Required fields are marked *

Back to top button