ಇದು ಯುದ್ಧದ ಅಂತ್ಯವಲ್ಲ, ಕದನ ವಿರಾಮವಷ್ಟೇ’

ಇರಾನ್ನ ಸರ್ವೋಚ್ಚ ನಾಯಕ ಮೊಜ್ತಬಾ ಖಮೇನಿ ಅವರು ಕದನ ವಿರಾಮ ಘೋಷಣೆಯಾದ ಬೆನ್ನಲ್ಲೇ ತಮ್ಮ ಮಿಲಿಟರಿ ಘಟಕಗಳಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ. ಈ ಕದನ ವಿರಾಮವು ಕೇವಲ ತಾತ್ಕಾಲಿಕ ವಿರಾಮವಷ್ಟೇ ಹೊರತು, ಇದು ಯುದ್ಧದ ಅಂತ್ಯವಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಅವರ ನಿರ್ಧಾರದಿಂದ ಸದ್ಯಕ್ಕೆ ದಾಳಿ ನಿಂತಿದ್ದರೂ, ಇರಾನ್ ಪಡೆಗಳು ಯಾವುದೇ ಕ್ಷಣದಲ್ಲಿ ಯುದ್ಧಕ್ಕೆ ಸನ್ನದ್ಧವಾಗಿರಬೇಕು ಎಂದು ಸೂಚಿಸಿದ್ದಾರೆ.
ಶಾಂತಿ ಮಾತುಕತೆಗಳ ನಡುವೆಯೇ ಅಮೆರಿಕ ಅಥವಾ ಇಸ್ರೇಲ್ ಯಾವುದೇ ರೀತಿಯಲ್ಲಿ ತಪ್ಪಾಗಿ ವರ್ತಿಸಿದರೆ ಅಥವಾ ಪ್ರಚೋದನೆ ನೀಡಿದರೆ ಇರಾನ್ ಸುಮ್ಮನೆ ಕೂರುವುದಿಲ್ಲ ಎಂದು ಖಮೇನಿ ಗುಡುಗಿದ್ದಾರೆ. ಕದನ ವಿರಾಮವನ್ನು ಯುದ್ಧದ ಮುಕ್ತಾಯ ಎಂದು ಭಾವಿಸಿ ಮೈಮರೆಯಬಾರದು ಎಂದು ಅವರು ಇರಾನ್ ಮಿಲಿಟರಿ ಕಮಾಂಡರ್ಗಳಿಗೆ ಎಚ್ಚರಿಸಿದ್ದಾರೆ. ಒಂದು ವೇಳೆ ಎದುರಾಳಿ ರಾಷ್ಟ್ರಗಳು ಒಪ್ಪಂದದ ನಿಯಮ ಮೀರಿ ನಡೆದರೆ ತಕ್ಕ ಪ್ರತ್ಯುತ್ತರ ನೀಡಲು ಇರಾನ್ ಸರ್ವ ಸನ್ನದ್ಧವಾಗಿದೆ ಎಂಬ ಸಂದೇಶವನ್ನು ರವಾನಿಸಿದ್ದಾರೆ.
ಈ ಹೇಳಿಕೆಯು ಮಧ್ಯಪ್ರಾಚ್ಯದಲ್ಲಿ ಇನ್ನು ಕೂಡ ಯುದ್ಧದ ಕಾರ್ಮೋಡ ಸರಿದಿಲ್ಲ ಎಂಬುದನ್ನು ಸಾಬೀತುಪಡಿಸಿದೆ. ಟ್ರಂಪ್ ಅವರ ತಾತ್ಕಾಲಿಕ ಕದನ ವಿರಾಮದ ನಡುವೆಯೂ, ಮೊಜ್ತಬಾ ಖಮೇನಿ ಅವರ ಈ ಕಠಿಣ ನಿಲುವು ಜಾಗತಿಕ ವಲಯದಲ್ಲಿ ಹೊಸ ಆತಂಕಕ್ಕೆ ಕಾರಣವಾಗಿದೆ. ಶಾಂತಿ ಮಾತುಕತೆಗಳು ನಡೆಯುತ್ತಿದ್ದರೂ ಇರಾನ್ ತನ್ನ ರಕ್ಷಣಾತ್ಮಕ ಮತ್ತು ಆಕ್ರಮಣಕಾರಿ ಸಿದ್ಧತೆಗಳಿಂದ ಹಿಂದೆ ಸರಿಯುವ ಲಕ್ಷಣಗಳು ಕಾಣುತ್ತಿಲ್ಲ.




