“ವಸ್ತುಗಳನ್ನು ಮೊದಲೇ ತೋರಿಸಬೇಕಿತ್ತು”; ಪ್ರೇಮ್ ಹಾಡಿನ ವಿವಾದಕ್ಕೆ ಹಿರಿಯ ನಟಿ ಜಯಮಾಲಾ ವಿಶ್ಲೇಷಣೆ!

ನಟ ಪ್ರೇಮ್ ಅಭಿನಯದ ‘ಸೆರಗು ಸರ್ಸೆ’ ಹಾಡಿನ ಸಾಹಿತ್ಯ ಅಶ್ಲೀಲವಾಗಿದೆ ಎಂಬ ಕಾರಣಕ್ಕೆ ಉಂಟಾದ ವಿವಾದ ಸದ್ಯಕ್ಕೆ ತಣ್ಣಗಾಗುವ ಲಕ್ಷಣ ಕಾಣುತ್ತಿಲ್ಲ. ಈಗಾಗಲೇ ಸಾಮಾಜಿಕ ಜಾಲತಾಣಗಳಿಂದ ಈ ಹಾಡನ್ನು ಡಿಲೀಟ್ ಮಾಡಲಾಗಿದ್ದು, ಪ್ರೇಮ್ ಅವರು ಕ್ಷಮೆ ಕೇಳಿ ಹೊಸ ಸಾಹಿತ್ಯ ಬರೆಯುವುದಾಗಿ ಘೋಷಿಸಿದ್ದಾರೆ. ಈ ವಿಚಾರವಾಗಿ ಹಿರಿಯ ನಟಿ ಜಯಮಾಲಾ ಮಾತನಾಡಿದ್ದು, ಸಿನಿಮಾ ರಂಗದಲ್ಲಿ ಡಬಲ್ ಮೀನಿಂಗ್ ಹಾಡುಗಳ ಬಳಕೆ ಹೊಸದೇನಲ್ಲ ಎಂಬ ಅರ್ಥದಲ್ಲಿ ಪ್ರತಿಕ್ರಿಯಿಸಿದ್ದಾರೆ.
ಸಂದರ್ಶನವೊಂದರಲ್ಲಿ ರವಿಚಂದ್ರನ್ ಅವರ ಹಳೆಯ ಹಿಟ್ ಹಾಡನ್ನು ಉದಾಹರಣೆಯಾಗಿ ನೀಡಿದ ಜಯಮಾಲಾ , ಪ್ರೇಮ್ ಮಾಡಿದ ಎಡವಟ್ಟು ಏನೆಂಬುದನ್ನು ವಿವರಿಸಿದ್ದಾರೆ. “ರವಿಚಂದ್ರನ್ ಅವರ ಹಾಡಿನಲ್ಲಿ ‘ಹೇ ಗಂಗು… ಕ್ಲಚ್ ಹಿಡಿ, ಒತ್ತು, ಎತ್ತು’ ಎಂಬಂತಹ ಸಾಹಿತ್ಯವಿತ್ತು. ಅದು ಕೂಡ ಡಬಲ್ ಮೀನಿಂಗ್ ಹಾಡೇ ಆಗಿತ್ತು. ಆದರೆ ಆ ಹಾಡಿನಲ್ಲಿ ಕೊನೆಯಲ್ಲಿ ಬೈಕ್ ಅನ್ನು ತೋರಿಸುವ ಮೂಲಕ ಆ ಪದಗಳ ಅರ್ಥವನ್ನು ಸಮರ್ಥಿಸಿಕೊಳ್ಳಲಾಗಿತ್ತು. ಆದರೆ ಪ್ರೇಮ್ ಅವರ ಹಾಡಿನಲ್ಲಿ ಉಪ್ಪಿನಕಾಯಿ, ಬಾಟಲಿಗಳ ಬಗ್ಗೆ ಸಾಹಿತ್ಯವಿದ್ದರೂ, ಅವುಗಳನ್ನು ದೃಶ್ಯದ ಮೊದಲೇ ತೋರಿಸದ ಕಾರಣ ಜನರು ಅದನ್ನು ಬೇರೆ ರೀತಿಯಲ್ಲಿ ಅರ್ಥೈಸಿಕೊಂಡರು” ಎಂದು ಅಭಿಪ್ರಾಯಪಟ್ಟಿದ್ದಾರೆ.
ಕನ್ನಡ ಚಿತ್ರರಂಗದಲ್ಲಿ ಈ ಹಿಂದೆಯೂ ಇಂತಹ ಅಶ್ಲೀಲ ಸಾಹಿತ್ಯ ಬರೆದು, ದೃಶ್ಯದ ಮಧ್ಯೆ ಬೇರೆ ಯಾವುದೋ ವಸ್ತುವನ್ನು ತೋರಿಸಿ ಆ ಅರ್ಥಗಳನ್ನು ಮುಚ್ಚಿ ಹಾಕುವ ತಂತ್ರಗಾರಿಕೆ ನಡೆಯುತ್ತಲೇ ಬಂದಿದೆ. ಆದರೆ ಪ್ರೇಮ್ ಅವರ ವಿಷಯದಲ್ಲಿ ಈ ಸಮತೋಲನ ತಪ್ಪಿದ್ದರಿಂದ ಅವರು ವಿವಾದಕ್ಕೆ ಸಿಲುಕಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಜಯಮಾಲಾ ಅವರ ಈ ವಿಶ್ಲೇಷಣೆಯು ಸೋಷಿಯಲ್ ಮೀಡಿಯಾದಲ್ಲಿ ಭಾರಿ ಚರ್ಚೆಗೆ ನಾಂದಿ ಹಾಡಿದೆ.




