ದೆಹಲಿ: ಬೆಳಿಗ್ಗೆ ವಾಕಿಂಗ್ ಹೋಗಿದ್ದ ಕಾಂಗ್ರೆಸ್ ಸಂಸದೆ ಸುಧಾ ರಾಮಕೃಷ್ಣನ್ ಅವರ ಚಿನ್ನದ ಸರವನ್ನು ಕಳ್ಳರು ದೋಚಿ ಪರಾರಿಯಾಗಿರುವ ಘಟನೆ ನವಹೆಹಲಿಯಲ್ಲಿ ನಡೆದಿದೆ.
ತಮಿಳುನಾಡಿನ ಮೈಲಾಡುತುರೈನ ಸಂಸದೆ ಸುಧಾ ರಾಮಕೃಷ್ಣನ್, ಚಾಣಕ್ಯಪುರಿಯ ರಾಜತಾಂತ್ರಿಕ ಪ್ರದೇಶದಲ್ಲಿರುವ ಪೋಲೆಂಡ್ ರಾಯಭಾರ ಕಚೇರಿಯ ಬಳಿ ಸಹ ಶಾಸಕಿ ಡಿಎಂಕೆಯ ರಾಜತಿ ಅವರೊಂದಿಗೆ ನಡೆದುಕೊಂಡು ಹೋಗುತ್ತಿದ್ದು ಈ ವೇಳೆ ಬೈಕ್ನಲ್ಲಿ ಬಂದ ಕಳ್ಳರು ಸರ ಕದ್ದು ಪರಾರಿಯಾಗಿದ್ದಾರೆ ಎಂದು ದೂರು ದಾಖಲಿಸಿದ್ದಾರೆ.
ಇನ್ನು ಈ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾಗೆ ಕೂಡ ಪತ್ರವನ್ನು ಬರೆದಿದ್ದಾರೆ. ಸ್ಕೂಟರ್‌ನಲ್ಲಿ ಹೆಲ್ಮೆಟ್ ಧರಿಸಿದ ವ್ಯಕ್ತಿ ತನ್ನ ಸರವನ್ನು ಎಗರಿಸಿ ಪರಾರಿಯಾಗಿದ್ದಾನೆ ಎಂದು ಹೇಳಿದ್ದಾರೆ.
ಬೆಳಿಗ್ಗೆ 6.15 ರಿಂದ 6.20 ರ ಸುಮಾರಿಗೆ ನಾವು ಪೋಲೆಂಡ್ ರಾಯಭಾರ ಕಚೇರಿಯ ಗೇಟ್ -3 ಮತ್ತು ಗೇಟ್ -4 ರ ಬಳಿ ಇದ್ದಾಗ, ಹೆಲ್ಮೆಟ್ ಧರಿಸಿ ಬಂದ ಬೈಕ್ ಸವಾರ ನಮ್ಮ ಬಳಿಗೆ ಬಂದು ಚಿನ್ನದ ಸರವನ್ನು ಕಸಿದುಕೊಂಡು ಪರಾರಿಯಾಗಿದ್ದಾನೆ ಎಂದು ಉಲ್ಲೇಖಿಸಿದ್ದಾರೆ.
ಅವನು ವಿರುದ್ಧ ದಿಕ್ಕಿನಲ್ಲಿ ನಿಧಾನವಾಗಿ ಬರುತ್ತಿದ್ದರಿಂದ, ಅವನು ಕಳ್ಳನಾಗಿರಬಹುದು ಎಂದು ನನಗೆ ಸಂಶಯವಾಗಲಿಲ್ಲ. ಅವನು ನನ್ನ ಕುತ್ತಿಗೆಯಿಂದ ಸರ ಎಳೆದಾಗ ನನ್ನ ಕುತ್ತಿಗೆಗೆ ಗಾಯವಾಗಿದ್ದು, ನನ್ನ ಬಟ್ಟೆ ಹರದಿ ಹೋಗಿದೆ. ತಕ್ಷಣ ನಾವು ಸಹಾಯಕ್ಕಾಗಿ ಕೂಗಿಕೊಂಡಿದ್ದು, ದೆಹಲಿ ಪೊಲೀಸರ ಮೊಬೈಲ್ ಗಸ್ತು ವಾಹನವನ್ನು ಗಮನಿಸಿ ಅವರಿಗೆ ದೂರು ನೀಡಿದ್ದಾರೆ.
ರಾಷ್ಟ್ರ ರಾಜಧಾನಿ ದೆಹಲಿಯ ಹೆಚ್ಚಿನ ಭದ್ರತಾ ವಲಯದಲ್ಲಿ ಮಹಿಳೆಯರಿಗೆ ಸುರಕ್ಷತೆ ನೀಡಲು ಸಾಧ್ಯವಾಗದಿದ್ದರೆ ಜೀವಗಳು ಮತ್ತು ಬೆಲೆಬಾಳುವ ವಸ್ತುಗಳಿಗೆ ಹೆದರದೆ ನಾವು ಬೇರೆಲ್ಲಿ ಸುರಕ್ಷಿತವಾಗಿರಲು ಸಾಧ್ಯ ಎಂದು ಪ್ರಶ್ನಿಸಿದ್ದಾರೆ.


