
ಮಧ್ಯಪ್ರಾಚ್ಯದಲ್ಲಿ ಇರಾನ್-ಇಸ್ರೇಲ್ ನಡುವೆ ನಡೆಯುತ್ತಿರುವ ರಣಭೀಕರ ಸಂಘರ್ಷದ ಕಿಚ್ಚು ಸಾವಿರಾರು ಕಿಲೋಮೀಟರ್ ದೂರದಲ್ಲಿರುವ ಕಾಸರಗೋಡಿನ ಉಪ್ಪಳದ ಮನೆಮನೆಗಳಲ್ಲಿ ಆತಂಕದ ಕಪ್ಪು ಛಾಯೆಯನ್ನು ಮೂಡಿಸಿದೆ. ಉಪ್ಪಳ ಭಾಗದ ಬಹುತೇಕ ಯುವಕರು ಹಡಗುಗಳಲ್ಲಿ ಕೆಲಸ ಮಾಡುತ್ತಿದ್ದು, ಸಂಘರ್ಷದ ಕೇಂದ್ರಬಿಂದುವಾಗಿರುವ ಸಮುದ್ರ ಮಾರ್ಗಗಳಲ್ಲಿ ಕಾರ್ಯನಿರ್ವಹಿಸುತ್ತಿರುವುದು ಕುಟುಂಬಸ್ಥರ ನಿದ್ದೆಗೆಡಿಸಿದೆ.
ಉಪ್ಪಳದ ಬಹುತೇಕ ಪ್ರತಿ ಮನೆಯಿಂದಲೂ ಕನಿಷ್ಠ ಒಬ್ಬರಾದರೂ ಹಡಗಿನಲ್ಲಿ ಕೆಲಸ ಮಾಡುತ್ತಿದ್ದಾರೆ. ತೈಲ ಮತ್ತು ಸರಕು ಸಾಗಾಟದ ಹಡಗುಗಳಲ್ಲಿ ಕೆಲಸ ಮಾಡುವ ಇವರು, ಆರು ತಿಂಗಳಿಗೊಮ್ಮೆ ಅಥವಾ ಅದಕ್ಕಿಂತ ಹೆಚ್ಚಿನ ಸಮಯದ ನಂತರವಷ್ಟೇ ಮನೆಗೆ ಬರುತ್ತಾರೆ. ಈಗ ಮಧ್ಯಪ್ರಾಚ್ಯದಲ್ಲಿ ಯುದ್ಧದ ಪರಿಸ್ಥಿತಿ ಉಲ್ಬಣಗೊಂಡಿದ್ದು, ಹಾರ್ಮೋಜ್ ಜಲಸಂಧಿ ಸೇರಿದಂತೆ ಸಂಘರ್ಷ ಪೀಡಿತ ಸಮುದ್ರ ಮಾರ್ಗಗಳಲ್ಲಿ ಹಡಗುಗಳ ಓಡಾಟ ಅಪಾಯಕಾರಿಯಾಗಿ ಪರಿಣಮಿಸಿದೆ.
ಯುದ್ಧದ ತೀವ್ರತೆ ಹೆಚ್ಚುತ್ತಿರುವುದರಿಂದ ಹಡಗಿನ ಸಿಬ್ಬಂದಿ ವರ್ಗವು ಈಗ ಹೈ ಅಲರ್ಟ್ನಲ್ಲಿದೆ. ತಮ್ಮ ಕುಟುಂಬ ಸದಸ್ಯರ ಸುರಕ್ಷತೆಗಾಗಿ ಆತಂಕದಿಂದ ಕಾಯುತ್ತಿರುವ ಉಪ್ಪಳದ ಜನತೆ, ಅಂತರಾಷ್ಟ್ರೀಯ ಸಮುದಾಯ ಮಧ್ಯಪ್ರವೇಶಿಸಿ ಯುದ್ಧವನ್ನು ಆದಷ್ಟು ಬೇಗ ನಿಲ್ಲಿಸಬೇಕು ಎಂದು ದೇವರ ಮೊರೆ ಹೋಗಿದ್ದಾರೆ.#MerchantNavy



