ದೇಶ/ವಿದೇಶಸುದ್ದಿಹಣಕಾಸು

ಅಡುಗೆ ಮನೆಗೆ ತಟ್ಟಿದ ಇರಾನ್-ಇಸ್ರೇಲ್ ಯುದ್ಧದ ಬಿಸಿ; ಅಡುಗೆ ಎಣ್ಣೆ ಬೆಲೆ ಏರಿಕೆ !

ಇರಾನ್ ಮತ್ತು ಇಸ್ರೇಲ್ ನಡುವೆ ನಡೆಯುತ್ತಿರುವ ಯುದ್ಧದ ಕಿಚ್ಚು ಈಗ ನೇರವಾಗಿ ಸಾಮಾನ್ಯ ಜನರ ಅಡುಗೆ ಮನೆಗೆ ತಟ್ಟಿದೆ. ಯುದ್ಧದ ನೆಪದಲ್ಲಿ ಮಾರುಕಟ್ಟೆಯಲ್ಲಿ ಅಡುಗೆ ಎಣ್ಣೆ ಬೆಲೆ ಸೈಲೆಂಟ್ ಆಗಿ ಏರಿಕೆಯಾಗುತ್ತಿದ್ದು, ಜನಸಾಮಾನ್ಯರ ಜೇಬಿಗೆ ಕತ್ತರಿ ಬೀಳುತ್ತಿದೆ. ಕಳೆದ ಕೆಲವೇ ದಿನಗಳಲ್ಲಿ ಪ್ರತಿ ಲೀಟರ್ ಅಡುಗೆ ಎಣ್ಣೆಯ ಮೇಲೆ 4 ರಿಂದ 5 ರೂಪಾಯಿ ದಿಢೀರ್ ಏರಿಕೆ ಕಂಡಿದ್ದು, ಯುದ್ಧದ ತೀವ್ರತೆ ಹೀಗೆಯೇ ಮುಂದುವರಿದರೆ ಬೆಲೆ ಮತ್ತಷ್ಟು ಗಗನಕ್ಕೇರುವ ಭೀತಿ ಆವರಿಸಿದೆ.

ಮಾರುಕಟ್ಟೆಯ ಇತ್ತೀಚಿನ ವರದಿಗಳ ಪ್ರಕಾರ, ಜನಪ್ರಿಯ ಬ್ರಾಂಡ್‌ಗಳಾದ ಗೋಲ್ಡ್ ವಿನ್ನರ್, ಸನ್‌ಪ್ಯೂರ್ ಮತ್ತು ಫಾರ್ಚೂನ್ ಎಣ್ಣೆಗಳ ಬೆಲೆಯಲ್ಲಿ ಹೆಚ್ಚಳ ಕಂಡುಬಂದಿದೆ. ಮುಂದಿನ ವಾರ ಪ್ರತಿ ಲೀಟರ್‌ಗೆ 10 ರಿಂದ 15 ರೂಪಾಯಿಗಳಷ್ಟು ಬೆಲೆ ಏರಿಕೆಯಾಗುವ ಸಾಧ್ಯತೆಯಿದೆ ಎಂದು ಅಂದಾಜಿಸಲಾಗಿದೆ. ಅಂತರಾಷ್ಟ್ರೀಯ ಮಟ್ಟದ ಸಂಘರ್ಷವನ್ನು ಮುಂದಿಟ್ಟುಕೊಂಡು ಸ್ಥಳೀಯ ಮಾರುಕಟ್ಟೆಯಲ್ಲಿ ಬೆಲೆ ಏರಿಕೆ ಮಾಡುತ್ತಿರುವುದು ಗ್ರಾಹಕರ ಆಕ್ರೋಶಕ್ಕೆ ಕಾರಣವಾಗಿದೆ.

ಬೆಲೆ ಏರಿಕೆಯ ಹಿಂದೆ ವರ್ತಕರ ಕೈವಾಡವಿರುವ ಬಗ್ಗೆ ದಟ್ಟವಾದ ಅನುಮಾನಗಳು ವ್ಯಕ್ತವಾಗುತ್ತಿವೆ. ಅಸಲಿಗೆ ಕನಿಷ್ಠ ಒಂದು ತಿಂಗಳಿಗೆ ಆಗುವಷ್ಟು ಅಡುಗೆ ಎಣ್ಣೆಯ ದಾಸ್ತಾನು ಲಭ್ಯವಿದ್ದರೂ, ಯುದ್ಧದ ನೆಪ ಹೇಳಿ ವರ್ತಕರು ಉದ್ದೇಶಪೂರ್ವಕವಾಗಿ ಬೆಲೆ ಏರಿಸುತ್ತಿದ್ದಾರೆ ಎಂಬ ಆರೋಪ ಕೇಳಿಬರುತ್ತಿದೆ. ಕೃತಕ ಅಭಾವ ಸೃಷ್ಟಿಸಿ ಹೆಚ್ಚಿನ ಲಾಭ ಮಾಡಿಕೊಳ್ಳಲು ಕೆಲವು ದೊಡ್ಡ ವ್ಯಾಪಾರಿಗಳು ಸಂಚು ರೂಪಿಸಿದ್ದಾರೆ ಎಂದು ಸಾರ್ವಜನಿಕರು ದೂರಿದ್ದಾರೆ.

ಯುದ್ಧದ ಪರಿಸ್ಥಿತಿಯನ್ನು ಬಂಡವಾಳ ಮಾಡಿಕೊಂಡು ಸಾರ್ವಜನಿಕರ ಸುಲಿಗೆ ಮಾಡುತ್ತಿರುವ ವರ್ತಕರ ವಿರುದ್ಧ ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕಿದೆ. ಮಾರುಕಟ್ಟೆಯ ಚಟುವಟಿಕೆಗಳ ಮೇಲೆ ನಿಗಾ ಇರಿಸಿ, ಬೆಲೆ ಏರಿಕೆಯನ್ನು ನಿಯಂತ್ರಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ. ಇಲ್ಲದಿದ್ದರೆ ಅಗತ್ಯವಸ್ತುಗಳ ಬೆಲೆ ಗಗನಕ್ಕೇರಿ ಬಡ ಮತ್ತು ಮಧ್ಯಮ ವರ್ಗದ ಜನರ ಬದುಕು ಮತ್ತಷ್ಟು ದುಸ್ತರವಾಗಲಿದೆ.

Comments (0)

Your email address will not be published. Required fields are marked *

Back to top button