DAVANAGEREರಾಜಕೀಯರಾಜ್ಯಸುದ್ದಿ

ಐದು ದಿನದ ಪ್ಲಾನ್ ಈಗ ಕೇವಲ ಒಂದೇ ದಿನಕ್ಕೆ ಸೀಮಿತ..!

ದಾವಣಗೆರೆ : ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣಾ ಪ್ರಚಾರದ ಕುರಿತು ಸಚಿವ ಜಮೀರ್ ಅಹ್ಮದ್ ಖಾನ್ ಅವರ ನಡೆ ಅಂತಿಮವಾಗಿ ಸ್ಪಷ್ಟವಾಗಿದ್ದು, ಐದು ದಿನಗಳ ಕಾಲ ನಡೆಸಬೇಕಿದ್ದ ದೀರ್ಘ ಪ್ರಚಾರದ ಯೋಜನೆಯು ಈಗ ಕೇವಲ ಒಂದು ದಿನಕ್ಕೆ ಸೀಮಿತಗೊಂಡಿದೆ. ಈ ಬೆಳವಣಿಗೆಯು ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದ್ದು, ವಿಶೇಷವಾಗಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಅವರೊಂದಿಗೆ ಜಮೀರ್ ಅವರಿಗಿರುವ ಮುನಿಸು ಈಗ ಬಹಿರಂಗವಾಗಿ ಸಾಬೀತಾದಂತಿದೆ. ಸಾಧಿಕ್ ಪೈಲ್ವಾನ್ ಅವರಿಗೆ ಟಿಕೆಟ್ ತಪ್ಪಿದ ವಿಚಾರದಲ್ಲಿ ಅಸಮಾಧಾನಗೊಂಡಿದ್ದಾರೆ ಎನ್ನಲಾದ ಜಮೀರ್, ನಾಮಪತ್ರ ಸಲ್ಲಿಕೆಯಂತಹ ಪ್ರಮುಖ ಸಂದರ್ಭದಲ್ಲೂ ದಾವಣಗೆರೆಗೆ ಬಾರದೆ ಅಂತರ ಕಾಯ್ದುಕೊಂಡಿದ್ದರು. ಇದೀಗ ಏಪ್ರಿಲ್ 5 ರಂದು ಮಾತ್ರ ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಅಲ್ಪ ಸಮಯದ ಪ್ರಚಾರ ನಡೆಸಲು ಅವರು ಒಪ್ಪಿಕೊಂಡಿದ್ದು, ಇದು ಕೇವಲ ಔಪಚಾರಿಕ ಭೇಟಿಯಂತೆ ಕಾಣುತ್ತಿದೆ.

ದಾವಣಗೆರೆಯ ‘ದೋಸ್ತಿ’ ರಾಜಕಾರಣಕ್ಕೆ ಸದ್ಯಕ್ಕೆ ವಿರಾಮ ನೀಡಿರುವ ಜಮೀರ್ ಅಹ್ಮದ್, ತಮ್ಮ ಸಂಪೂರ್ಣ ಗಮನವನ್ನು ಈಗ ಬಾಗಲಕೋಟೆಯತ್ತ ಹರಿಸಿದ್ದಾರೆ. ಏಪ್ರಿಲ್ 6 ಮತ್ತು 7 ರಂದು ಬಾಗಲಕೋಟೆ ಕ್ಷೇತ್ರದಲ್ಲಿ ಅಬ್ಬರದ ಪ್ರಚಾರ ನಡೆಸಲು ಅವರು ಸಜ್ಜಾಗಿದ್ದು, ಅಲ್ಲಿನ ಮುಸ್ಲಿಂ ಮುಖಂಡರ ಒತ್ತಾಯಕ್ಕೆ ಮಣಿದು ಹೆಚ್ಚಿನ ಸಮಯವನ್ನು ಮೀಸಲಿಟ್ಟಿದ್ದಾರೆ. ದಾವಣಗೆರೆಯಲ್ಲಿ ಕೇವಲ ಒಂದು ದಿನಕ್ಕೆ ಪ್ರಚಾರ ಸೀಮಿತಗೊಳಿಸಿ, ಬಾಗಲಕೋಟೆಯಲ್ಲಿ ಎರಡು ದಿನಗಳ ಕಾಲ ಬೀಡುಬಿಡಲಿರುವುದು ಕಾಂಗ್ರೆಸ್ ಪಾಳಯದ ಒಳಗಿನ ಭಿನ್ನಮತವನ್ನು ಎತ್ತಿ ತೋರಿಸುತ್ತಿದೆ.

ಕೈ ನಾಯಕರ ಈ ಕಣ್ಣಾಮುಚ್ಚಾಲೆ ಆಟ ಮತ್ತು ಆಂತರಿಕ ಅಸಮಾಧಾನಗಳು ಚುನಾವಣಾ ಫಲಿತಾಂಶದ ಮೇಲೆ ಯಾವ ರೀತಿ ಪರಿಣಾಮ ಬೀರಲಿವೆ ಎಂಬುದು ಈಗ ಕುತೂಹಲ ಮೂಡಿಸಿದ್ದು, ಮತದಾರರು ಈ ಬೆಳವಣಿಗೆಗಳಿಗೆ ಯಾವ ರೀತಿ ಪ್ರತಿಕ್ರಿಯಿಸಲಿದ್ದಾರೆ ಎಂಬುದು ಕಾದು ನೋಡಬೇಕಿದೆ.

Comments (0)

Your email address will not be published. Required fields are marked *

Back to top button