ಹುಬ್ಬಳ್ಳಿ: ಚುನಾವಣೆ ಆಯೋಗ ಕೇಂದ್ರ ಬಿಜೆಪಿ ಸರ್ಕಾರದ ಕೈಗೊಂಬೆಯಂತೆ ವರ್ತಿಸುತ್ತಿದೆ ಎಂದು ಕಾಂಗ್ರೆಸ್ ಎಂಎಲ್ಸಿ ಸಲೀಂ ಅಹ್ಮದ್ ವಾಗ್ದಾಳಿ ನಡೆಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಬಿಜೆಪಿ ಪರವಾಗಿ ಹೆಚ್ಚುವರಿ ಮತದಾರರನ್ನು ಸೇರಿಸಿದೆ. ಇದನ್ನು ಖಂಡಿಸಿ ಅಗಸ್ಟ್ 5 ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಸಲೀಂ ಅಹ್ಮದ್ ತಿಳಿಸಿದರು.
ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದಲ್ಲಿಯೇ 40 ಸಾವಿರಕ್ಕೂ ಅಧಿಕ ಹೊಸಮತದಾರರನ್ನು ನಾಲ್ಕೈದು ತಿಂಗಳಲ್ಲಿ ಸೇರಿಸಲಾಗಿದೆ. ಉಳಿದ ಕ್ಷೇತ್ರದಲ್ಲಿ ಇದು ನಡೆದಿರಬಹುದು, ಎಲ್ಲ ವಿವರಗಳನ್ನು ರಾಹುಲ್ ಗಾಂಧಿ ಮಾಹಿತಿ ಮತ್ತು ದಾಖಲೆ ಬಿಡುಗಡೆ ಮಾಡಲಿದ್ದಾರೆ. ನಂತರ ಚುನಾವಣೆ ಆಯೋಗಕ್ಕೆ ಮನವಿ ಪತ್ರವನ್ನು ಸಹ ಕೊಡಲಾಗುವುದು.
ಚುನಾವಣೆ ಆಯೋಗವನ್ನು ದುರ್ಬಳಕೆ ಮಾಡಿಕೊಂಡು ತನ್ನ ಗೆಲುವಿಗಾಗಿ ಬಿಜೆಪಿ ಸರ್ಕಾರ ಅಕ್ರಮಗಳನ್ನು ನಡೆಸಿದ್ದು, ಮುಂದಿನ ದಿನಗಳಲ್ಲಿ ನಮ್ಮ ಹೋರಾಟ ತೀವ್ರಗೊಳಲಿದೆ ಎಂದರು.
ಇನ್ನು ಮಹದಾಯಿ ಯೋಜನೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು ಮಹದಾಯಿ ಯೋಜನೆ ಅನುಷ್ಠಾನಗೊಳಿಸಲು ರಾಜ್ಯ ಸರ್ಕಾರ ಎಲ್ಲ ರೀತಿಯಲ್ಲಿ ಸಿದ್ದವಾಗಿದ್ದು, ಬಿಜೆಪಿಯ ಕೇಂದ್ರ ಸಚಿವರು ಮತ್ತು ಸಂಸದರು ಪರಿಸರ ಮತ್ತು ವನ್ಯ ಜೀವಿ ಅನುಮತಿಯನ್ನು ಕೇಂದ್ರ ಸರ್ಕಾರದಿಂದ ಕೊಡಿಸಬೇಕೆಂದು ಆಗ್ರಹಿಸಿದರು.


