Top Newsರಾಜಕೀಯರಾಜ್ಯಸುದ್ದಿ

ಯತೀಂದ್ರ ಹಸ್ತಕ್ಷೇಪಕ್ಕೆ ತನ್ವೀರ್ ಸೇಠ್ ಅಸಮಾಧಾನ: ವೇದಿಕೆಯಲ್ಲೇ ಹೈಡ್ರಾಮಾ!

ಮುಖ್ಯಮಂತ್ರಿಗಳ ಪುತ್ರ ಯತೀಂದ್ರ ಸಿದ್ದರಾಮಯ್ಯ ಅವರ ಹಸ್ತಕ್ಷೇಪದ ವಿಚಾರ ರಾಜ್ಯ ರಾಜಕಾರಣದಲ್ಲಿ ಮತ್ತೆ ಸಂಚಲನ ಮೂಡಿಸಿದ್ದು, ಕಾಂಗ್ರೆಸ್‌ನ ಹಿರಿಯ ನಾಯಕ ತನ್ವೀರ್ ಸೇಠ್ ಬಹಿರಂಗವಾಗಿಯೇ ತಮ್ಮ ಅಸಮಾಧಾನ ಪ್ರದರ್ಶಿಸಿದ್ದಾರೆ.

ಮೈಸೂರಿನಲ್ಲಿ ಪೊಲೀಸ್ ಠಾಣೆಯೊಂದರ ಉದ್ಘಾಟನಾ ಸಮಾರಂಭದ ವೇಳೆ ಈ ಹೈಡ್ರಾಮಾ ನಡೆದಿದ್ದು, ಕೆಪಿಸಿಸಿ ಕಾರ್ಯಾಧ್ಯಕ್ಷ ಹಾಗೂ ನರಸಿಂಹರಾಜ ಕ್ಷೇತ್ರದ ಶಾಸಕರಾದ ತನ್ವೀರ್ ಸೇಠ್ ವೇದಿಕೆಯಲ್ಲೇ ಗೃಹ ಸಚಿವ ಜಿ. ಪರಮೇಶ್ವರ್ ಅವರ ಮುಂದೆ ತಮ್ಮ ಆಕ್ರೋಶ ಹೊರಹಾಕಿದ್ದಾರೆ.

ಕಾರ್ಯಕ್ರಮದ ಶಿಷ್ಟಾಚಾರ ಅಥವಾ ಹಸ್ತಕ್ಷೇಪದ ವಿಚಾರದಿಂದ ಅತೃಪ್ತರಾದ ತನ್ವೀರ್ ಸೇಠ್, ಕಾರ್ಯಕ್ರಮದಿಂದ ಹೊರನಡೆಯಲು ಮುಂದಾದರು. ಈ ಸಂದರ್ಭದಲ್ಲಿ ಗೃಹ ಸಚಿವ ಪರಮೇಶ್ವರ್ ಹಾಗೂ ಶಾಸಕ ಅನಿಲ್ ಚಿಕ್ಕಮಾದು ಅವರು ಸೇಠ್ ಅವರ ಮನವೊಲಿಸಲು ಹರಸಾಹಸ ಪಟ್ಟರು. “ಒಂದು ವೇಳೆ ನಾನು ಸ್ಟೇಜ್ ಮೇಲೆ ಬಂದರೆ ಬೇರೆ ರೀತಿಯಲ್ಲೇ ಮಾತನಾಡಬೇಕಾಗುತ್ತದೆ” ಎಂದು ಎಚ್ಚರಿಕೆ ನೀಡಿದ ಸೇಠ್, ಕೊನೆಗೆ ಪಕ್ಷದ ಹಿರಿಯ ನಾಯಕರ ಒತ್ತಾಯಕ್ಕೆ ಮಣಿದು ಒಲ್ಲದ ಮನಸ್ಸಿನಿಂದಲೇ ಕಾರ್ಯಕ್ರಮದಲ್ಲಿ ಭಾಗಿಯಾದರು.

ಈಗಾಗಲೇ ಸಚಿವ ಕೆ.ಜೆ. ಜಾರ್ಜ್ ಅವರು ಯತೀಂದ್ರ ಅವರ ಹಸ್ತಕ್ಷೇಪದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರು ಎಂಬ ಚರ್ಚೆ ಬೆನ್ನಲ್ಲೇ, ಈಗ ತನ್ವೀರ್ ಸೇಠ್ ಅವರ ನಡೆ ಕಾಂಗ್ರೆಸ್ ಪಾಳಯದಲ್ಲಿ ತಲ್ಲಣ ಸೃಷ್ಟಿಸಿದೆ. ಸರ್ಕಾರದ ಆಡಳಿತಾತ್ಮಕ ವಿಚಾರಗಳಲ್ಲಿ ಶಾಸಕರಲ್ಲದವರ ಪ್ರಭಾವ ಹೆಚ್ಚಾಗುತ್ತಿದೆ ಎಂಬ ಆರೋಪಕ್ಕೆ ಈ ಘಟನೆ ಮತ್ತಷ್ಟು ಪುಷ್ಟಿ ನೀಡುವಂತಿದೆ.

Comments (0)

Your email address will not be published. Required fields are marked *

Back to top button