ನೌಕರ ಆತ್ಮಾನಂದ ಸಾವಿನ ಸುತ್ತ ಅನುಮಾನದ ಹುತ್ತ..!

ಬೆಂಗಳೂರು:ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಗುತ್ತಿಗೆ ನೌಕರ ಆತ್ಮಾನಂದ ಅವರ ನಿಗೂಢ ಸಾವು ಇದೀಗ ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಬಸವೇಶ್ವರನಗರದ ತಮ್ಮ ಮನೆಯಲ್ಲಿ ಜಾರಿ ಬಿದ್ದು ಸಾವನ್ನಪ್ಪಿದ್ದಾರೆ ಎಂದು ಹೇಳಲಾಗುತ್ತಿದ್ದರೂ, ಈ ಸಾವಿನ ಹಿಂದೆ ಕಚೇರಿಯ ಪ್ರಭಾವಿ ಅಧಿಕಾರಿಗಳ ಕೈವಾಡವಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಕಚೇರಿಯಲ್ಲಿ ನಡೆಯುತ್ತಿದ್ದ ಭ್ರಷ್ಟಾಚಾರದ ‘ಮಾಲಿನ್ಯ’ವನ್ನು ಬಯಲು ಮಾಡಲು ಆತ್ಮಾನಂದ ಮುಂದಾಗಿದ್ದರೇ ಅಥವಾ ಇದೇ ಕಾರಣಕ್ಕೆ ಅವರು ಬಲಿಯಾದರೇ ಎಂಬ ಪ್ರಶ್ನೆಗಳು ಕಾಡುತ್ತಿವೆ.
ವರದಿಗಳ ಪ್ರಕಾರ, ಸಾವಿನ ಹಿಂದಿನ ದಿನ ಆತ್ಮಾನಂದ ಕಚೇರಿಯಲ್ಲಿ ಹಿರಿಯ ಅಧಿಕಾರಿಯೊಬ್ಬರ ಜೊತೆ ತೀವ್ರವಾಗಿ ಜಗಳವಾಡಿದ್ದರು ಎನ್ನಲಾಗಿದೆ. ಈ ಜಗಳದ ಮರುದಿನವೇ ಅವರು ಶವವಾಗಿ ಪತ್ತೆಯಾಗಿರುವುದು ಮತ್ತು ಶವ ಪರೀಕ್ಷೆ (Post-mortem) ನಡೆಸದೆ, ಪೊಲೀಸರಿಗೂ ಮಾಹಿತಿ ನೀಡದೆ ತರಾತುರಿಯಲ್ಲಿ ಶವಸಂಸ್ಕಾರ ಮಾಡಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಸಾಕ್ಷ್ಯಗಳನ್ನು ನಾಶಪಡಿಸಲು ಪ್ರಭಾವಿಗಳು ಮಾಸ್ಟರ್ ಪ್ಲ್ಯಾನ್ ನಡೆಸಿದ್ದಾರೆಯೇ ಎಂಬ ಅನುಮಾನ ಮೂಡಿದ್ದು, ಈ ಕುರಿತು ಸಮಗ್ರ ತನಿಖೆಯಾಗಬೇಕಿದೆ. ಒಂದು ಬಡ ನೌಕರನ ಸಾವು ಕಚೇರಿ ರಾಜಕೀಯದ ಬಲಿಪೀಠವೇರಿರುವುದು ವಿಷಾದನೀಯ ಸಂಗತಿಯಾಗಿದೆ.




