ಬೆಂಗಳೂರು: 26 ರ್ಷದ ಮಹಿಳೆ ಜೊತೆ ಲಿವಿಂಗ್ ಟುಗೆದರ್‌ನಲ್ಲಿದ್ದ ವ್ಯಕ್ತಿಯೋರ್ವ ಅನೈತಿಕ ಸಂಬಂಧದ ಶಂಕೆ ಹಿನ್ನೆಲೆ ಯುವತಿ ಮೇಲೆ ಪೆಟ್ರೋಲ್ ಸುರಿದು ಭೀಕರವಾಗಿ ಕೊಲೆ ಮಾಡಿರುವ ಘಟನೆ ನಗರದ ಹೊರವಲಯದ ಹುಳಿಮಾವು ಬಳಿ ನಡೆದಿದೆ.
ವನಜಾಕ್ಷಿ (26) ಮೃತ ಮಹಿಳೆ ಹಾಗೂ ಆರೋಪಿಯನ್ನು ವಿಠ್ಠಲ (52) ಎಂದು ಗುರುತಿಸಲಾಗಿದ್ದು, ಆರೋಪಿ ಕ್ಯಾಬ್ ಚಾಲಕನಾಗಿದ್ದ. ಆರೋಪಿ ವಿಠ್ಠಲ ಕಳೆದ ಮೂರ್ನಾಲ್ಕು ವರ್ಷಗಳಿಂದ ವನಜಾಕ್ಷಿ ಜೊತೆ ಲಿವಿಂಗ್ ಟುಗೆದರ್‌ನಲ್ಲಿದ್ದ. ಕಳೆದ ಕೆಲವು ದಿನಗಳಿಂದ ವನಜಾಕ್ಷಿ ಆತನನ್ನು ಕಡೆಗಣಿಸುತ್ತಿದ್ದಳು. ಅಲ್ಲದೆ, ಮಾಡಿ ಅದೇ ಗ್ರಾಮದ ಮತ್ತೊಬ್ಬರ ಜೊತೆ ಸಲುಗೆ ಬೆಳೆಸಿಕೊಂಡಿದ್ದಳು.
ಇದೇ ವಿಚಾರಕ್ಕೆ ವನಜಾಕ್ಷಿ ತನ್ನ ಸ್ನೇಹಿತನ ಜೊತೆ ಬನ್ನೇರುಘಟ್ಟದಿಂದ ಬಸವನಪುರಕ್ಕೆ ಕಾರಲ್ಲಿ ತೆರಳುತ್ತಿದ್ದಳು. ಈ ವೇಳೆ ಕಾರು ಹಿಂಬಾಲಿಸಿಕೊಂಡು ಹೋಗಿ ಪೆಟ್ರೋಲ್ ಅನ್ನು ಕಾರಿನ ಮೇಲೆ ಸುರಿಯಲು ಯತ್ನಿಸಿದ್ದಾನೆ. ಈ ವೇಳೆ ಕಾರಿನಿಂದ ಇಳಿದ ವನಜಾಕ್ಷಿ ಓಡಿ ಹೋಗಲು ಶುರು ಮಾಡಿದ್ದಾಳೆ. ಇಬ್ಬರನ್ನೂ ಹಿಂಬಾಲಿಸಿಕೊಂಡು ಹೋಗಿದ್ದ ವಿಠ್ಠಲ, ಆ ಬಳಿಕ ವನಜಾಕ್ಷಿ ಮೇಲೆ ಪೆಟ್ರೋಲ್ ಎರಚಿ ಲೈಟರ್ನಿಂದ ಬೆಂಕಿ ಹಚ್ಚಿದ್ದ. ಗಂಭೀರವಾಗಿ ಗಾಯಗೊಂಡ ವನಜಾಕ್ಷಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾಳೆ. ಈ ಸಂಬಂಧ ಹುಳಿಮಾವು ಪೊಲೀಸರು ಆರೋಪಿ ವಿಠ್ಠಲನನ್ನು ಬಂಧಿಸಿದ್ದಾರೆ.