ರಾಜ್ಯ ರಾಜಕಾರಣದ ದಿಕ್ಸೂಚಿ ಎಂದೇ ನಂಬಲಾದ ಕೋಡಿಮಠದ ಡಾ. ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿಗಳು ಯುಗಾದಿ ಬಳಿಕದ ದಿನಗಳ ಬಗ್ಗೆ ಸ್ಫೋಟಕ ಭವಿಷ್ಯ ನುಡಿದಿದ್ದು, ಆಡಳಿತ ಪಕ್ಷದ ಪಾಳಯದಲ್ಲಿ ತಲ್ಲಣ ಸೃಷ್ಟಿಸಿದ್ದಾರೆ. ಈ ಬಾರಿಯ ಯುಗಾದಿ ಕಳೆದ ನಂತರ ರಾಜ್ಯ ರಾಜಕೀಯದಲ್ಲಿ ಭಾರಿ ಸಂಚಲನ ಉಂಟಾಗಲಿದೆ ಎಂದು ಭವಿಷ್ಯ ನುಡಿದಿರುವ ಶ್ರೀಗಳು, ಸಂಪುಟದಲ್ಲಿ ಅಳವೋ-ನಲವೋ ಎಂಬ ನಿಗೂಢ ಪ್ರಶ್ನೆ ಎತ್ತಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಒಂದು ವೇಳೆ ತಾವಾಗಿಯೇ ಅಧಿಕಾರ ಬಿಟ್ಟರೆ ಮಾತ್ರ ರಾಜ್ಯದಲ್ಲಿ ಸಿಎಂ ಬದಲಾವಣೆ ಸಾಧ್ಯ ಎಂದು ಹೇಳುವ ಮೂಲಕ ಹೊಸ ರಾಜಕೀಯ ಸಮೀಕರಣಗಳಿಗೆ ಮುನ್ನುಡಿ ಬರೆದಿದ್ದಾರೆ.
ಸ್ವಾಮೀಜಿಗಳ ಭವಿಷ್ಯದ ಪ್ರಕಾರ, ಯುಗಾದಿಯ ನಂತರ ಪ್ರಕೃತಿಯಲ್ಲಿ ಗಾಳಿ-ಮಳೆ ಆರ್ಭಟ ಹೇಗಿರುತ್ತದೆಯೋ ಹಾಗೆಯೇ ರಾಜಕೀಯದಲ್ಲಿ ಅಶಾಂತಿ ತಲೆದೋರಲಿದೆ. ಸರ್ಕಾರ ಸುಭದ್ರವಾಗಿ ಕಂಡರೂ ಆಡಳಿತ ಪಕ್ಷದ ಒಳಗೆ “ಅತೃಪ್ತ ಆತ್ಮಗಳ” ಓಡಾಟ ಹೆಚ್ಚಾಗಲಿದ್ದು, ಇದು ಸರ್ಕಾರಕ್ಕೆ ದೊಡ್ಡ ಸವಾಲಾಗಿ ಪರಿಣಮಿಸಲಿದೆ. ಸಿದ್ದರಾಮಯ್ಯ ಅವರಿಗೆ ಕಾನೂನು ಸಂಕಷ್ಟ ಅಥವಾ ವೈಯಕ್ತಿಕ ಸವಾಲುಗಳು ಎದುರಾಗುವ ಸಾಧ್ಯತೆಯಿದ್ದು, ಈ ಸಂದರ್ಭದಲ್ಲಿ ಯಾರೂ ನಿರೀಕ್ಷಿಸದ ‘ಮೂರನೇ ವ್ಯಕ್ತಿ’ಗೆ ಅದೃಷ್ಟ ಒಲಿಯುವ ಸಾಧ್ಯತೆಯಿದೆ ಎಂದು ಶ್ರೀಗಳು ಸೂಚ್ಯವಾಗಿ ತಿಳಿಸಿದ್ದಾರೆ.
ಈ ಭವಿಷ್ಯದ ಅತ್ಯಂತ ಕುತೂಹಲಕಾರಿ ಅಂಶವೆಂದರೆ “ಅವರಾಗಿಯೇ ಬಿಟ್ಟುಕೊಟ್ಟರೆ” ಎಂಬ ಮಾತು. ಇದು ಸಿದ್ದರಾಮಯ್ಯ ಅವರ ಮೇಲೆ ಪಕ್ಷದ ಹೈಕಮಾಂಡ್ ಅಥವಾ ಸ್ವಪಕ್ಷೀಯರಿಂದ ಒತ್ತಡ ಬರಲಿದೆಯೇ ಅಥವಾ ಅವರೇ ಸ್ವಯಂಪ್ರೇರಿತರಾಗಿ ನಿರ್ಧಾರ ಕೈಗೊಳ್ಳಲಿದ್ದಾರೆಯೇ ಎಂಬ ಚರ್ಚೆಗೆ ದಾರಿ ಮಾಡಿಕೊಟ್ಟಿದೆ. ಒಟ್ಟಾರೆಯಾಗಿ ಯುಗಾದಿ ನಂತರದ ರಾಜಕೀಯ ಸ್ಥಿತ್ಯಂತರಗಳು ರಾಜ್ಯದಲ್ಲಿ ಹೊಸ ನಾಯಕತ್ವಕ್ಕೆ ಸಾಕ್ಷಿಯಾಗಲಿದೆಯೇ ಅಥವಾ ಸಿದ್ದರಾಮಯ್ಯ ಅವರ ರಾಜಕೀಯ ಚಾಣಾಕ್ಷತನ ಮತ್ತೆ ಗೆಲ್ಲಲಿದೆಯೇ ಎಂಬುದು ಕುತೂಹಲ ಮೂಡಿಸಿದೆ.


