‘ಹುಲಿ ಹುಲಿ’ ಎಂದು ರೀಲ್ಸ್ ಮಾಡಿದವರಿಗೆ ಪೊಲೀಸರ ‘ದಂಡ’ದ ಶಾಕ್!

ದೊಡ್ಡಬಳ್ಳಾಪುರ: ಸಾಮಾಜಿಕ ಜಾಲತಾಣದ ಕ್ರೇಜ್ಗಾಗಿ ಸಂಚಾರಿ ನಿಯಮಗಳನ್ನು ಗಾಳಿಗೆ ತೂರಿ ರೀಲ್ಸ್ ಮಾಡಿದ ಯುವಕರಿಗೆ ಈಗ ಪೊಲೀಸರು ಬಿಸಿ ಮುಟ್ಟಿಸಿದ್ದಾರೆ. ಹೆಲ್ಮೆಟ್ ಧರಿಸದೆ, ಒಂದೇ ಬೈಕ್ನಲ್ಲಿ ಮೂವರು ಕುಳಿತು ‘ಹುಲಿ ಹುಲಿ’ ಎಂದು ಕಿರುಚುತ್ತಾ ಅಪಾಯಕಾರಿ ರೀತಿಯಲ್ಲಿ ರೀಲ್ಸ್ ಮಾಡಿದ್ದ ವಿಡಿಯೋ ವೈರಲ್ ಆಗಿತ್ತು. ಈ ಕೃತ್ಯ ಎಸಗಿದ್ದ ರೀಲ್ಸ್ ಮಂಜು, ಗಂಗಾರಂಗ ಮತ್ತು ಸವಿತಾ ಎಂಬುವವರ ವಿರುದ್ಧ ಈಗ ಕಾನೂನು ಕ್ರಮ ಜರುಗಿಸಲಾಗಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ವಿಡಿಯೋ ಗಮನಿಸಿದ ಪೊಲೀಸರು ತಕ್ಷಣ ಕಾರ್ಯಪ್ರವೃತ್ತರಾಗಿದ್ದಾರೆ. ರೀಲ್ಸ್ ಮಂಜುವನ್ನು ಠಾಣೆಗೆ ಕರೆಸಿದ್ದ ಪೊಲೀಸರು, ಹೆಲ್ಮೆಟ್ ರಹಿತ ಚಾಲನೆ ಮತ್ತು ತ್ರಿಬಲ್ ರೈಡಿಂಗ್ ಮಾಡಿದ ಹಿನ್ನೆಲೆಯಲ್ಲಿ ಒಂದು ಸಾವಿರ ರೂಪಾಯಿ ದಂಡ ವಿಧಿಸಿದ್ದಾರೆ. ಕೇವಲ ದಂಡ ಮಾತ್ರವಲ್ಲದೆ, ಇಂತಹ ಬೇಜವಾಬ್ದಾರಿ ವರ್ತನೆಗಳು ಪ್ರಾಣಾಪಾಯಕ್ಕೆ ಕಾರಣವಾಗಬಹುದು ಎಂದು ಕಠಿಣ ಎಚ್ಚರಿಕೆಯನ್ನು ನೀಡಿದ್ದಾರೆ.
ಮುಂದಿನ ದಿನಗಳಲ್ಲಿ ಟ್ರಾಫಿಕ್ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಮತ್ತು ರಸ್ತೆ ಸುರಕ್ಷತೆಯ ಬಗ್ಗೆ ಜಾಗರೂಕರಾಗಿರಬೇಕು ಎಂದು ಪೊಲೀಸರು ಸೂಚನೆ ನೀಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಲೈಕ್ಸ್ ಮತ್ತು ವೀವ್ಸ್ಗಾಗಿ ಯುವಜನತೆ ತಮ್ಮ ಹಾಗೂ ಇತರರ ಪ್ರಾಣವನ್ನು ಪಣಕ್ಕಿಟ್ಟು ಸಾಹಸ ಪ್ರದರ್ಶಿಸುವುದು ಕಾನೂನುಬಾಹಿರ ಎಂಬ ಸಂದೇಶವನ್ನು ಈ ಪ್ರಕರಣದ ಮೂಲಕ ರವಾನಿಸಲಾಗಿದೆ.




