ಮಹಾಭಾರತದ ಸೇಡಿನ ಕಥೆಯ ಸ್ಫೂರ್ತಿಯೊಂದಿಗೆ ಸಿದ್ಧವಾಗಿರುವ “ಶಿಖಂಡಿ” ಚಿತ್ರದ ಮೋಷನ್ ಪೋಸ್ಟರ್ ಇತ್ತೀಚೆಗೆ ಅದ್ಧೂರಿಯಾಗಿ ಬಿಡುಗಡೆಯಾಗಿದ್ದು, ಗಾಂಧಿನಗರದಲ್ಲಿ ಕುತೂಹಲ ಮೂಡಿಸಿದೆ. ‘ಮಾರಕಾಸ್ತ್ರ’ ಚಿತ್ರದ ಮೂಲಕ ಗಮನ ಸೆಳೆದಿದ್ದ ನಿರ್ದೇಶಕ ಗುರುಮೂರ್ತಿ ವಿ ಅವರು ಈ ಬಾರಿ ಸಸ್ಪೆನ್ಸ್, ಥ್ರಿಲ್ಲರ್ ಮತ್ತು ಹಾರರ್ ಎಳೆಗಳಿರುವ ವಿಭಿನ್ನ ಕೌಟುಂಬಿಕ ಕಥೆಯನ್ನು ಬೆಳ್ಳಿತೆರೆಯ ಮೇಲೆ ತರುತ್ತಿದ್ದಾರೆ.
ಪೋಲಾ ಮೂವೀಸ್ ಬ್ಯಾನರ್ ಅಡಿಯಲ್ಲಿ ಪೋಲಾ ಪ್ರವೀಣ್ ಕುಮಾರ್ ಈ ಚಿತ್ರವನ್ನು ನಿರ್ಮಿಸಿದ್ದು, ಮೋಷನ್ ಪೋಸ್ಟರ್ ಬಿಡುಗಡೆ ಮಾಡಿದ ಗಣ್ಯರಾದ ಜಡೇಶ್ ಕೆ ಹಂಪಿ, ನವೀನ್ ರೆಡ್ಡಿ ಮತ್ತು ಸಂಜಯ್ ಗೌಡ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ.ಮಹಾಭಾರತದಲ್ಲಿ ಶಿಖಂಡಿ ಪಾತ್ರವು ಪುನರ್ಜನ್ಮ ಪಡೆದು ತನ್ನ ಸೇಡನ್ನು ತೀರಿಸಿಕೊಳ್ಳುವ ಕಥೆಯನ್ನೇ ಅಧಾರವಾಗಿಟ್ಟುಕೊಂಡು ಸಮಕಾಲೀನ ಸಮಾಜಕ್ಕೆ ಒಪ್ಪುವಂತೆ ಈ ಚಿತ್ರವನ್ನು ಹೆಣೆಯಲಾಗಿದೆ.

ನಿರ್ದೇಶಕ ಗುರುಮೂರ್ತಿ ಅವರ ಪ್ರಕಾರ, ಚಿತ್ರದಲ್ಲಿ ಹಾರರ್ ಮತ್ತು ಕಾಮಿಡಿ ಅಂಶಗಳೂ ಮಿಳಿತವಾಗಿದ್ದು ಪ್ರೇಕ್ಷಕರಿಗೆ ಸಂಪೂರ್ಣ ಮನರಂಜನೆ ನೀಡಲಿವೆ. ಚಿತ್ರದ ಚಿತ್ರೀಕರಣ ಈಗಾಗಲೇ ಪೂರ್ಣಗೊಂಡಿದ್ದು, ಎಲ್ಲವೂ ಅಂದುಕೊಂಡಂತೆ ನಡೆದರೆ ಮೇ ತಿಂಗಳಲ್ಲಿ “ಶಿಖಂಡಿ” ರಾಜ್ಯಾದ್ಯಂತ ತೆರೆಕಾಣುವ ಸಾಧ್ಯತೆಯಿದೆ. ವಿಶೇಷ ಚೇತನರಾಗಿದ್ದರೂ ಸಿನಿಮಾ ರಂಗದ ಮೇಲಿರುವ ನಿರ್ದೇಶಕರ ಛಲ ಮತ್ತು ಅವರು ಸಿದ್ಧಪಡಿಸಿದ ಕಥೆಯ ಬಲದಿಂದಾಗಿ ತಾವು ಈ ಸಿನಿಮಾ ನಿರ್ಮಾಣ ಮಾಡಲು ಮುಂದಾದೆ ಎಂದು ಬಳ್ಳಾರಿ ಮೂಲದ ನಿರ್ಮಾಪಕ ಪೋಲಾ ಪ್ರವೀಣ್ ಕುಮಾರ್ ತಿಳಿಸಿದ್ದಾರೆ.
ಈ ಚಿತ್ರದ ಮೂಲಕ ಯುವರಾಜ್ ಗೌಡ ನಾಯಕನಾಗಿ ಪಾದಾರ್ಪಣೆ ಮಾಡುತ್ತಿದ್ದು, ಚಿತ್ರದಲ್ಲಿ ಅವರ ಪಾತ್ರದ ಹೆಸರು ‘ಸೂರ್ಯ’. ನಾಯಕಿಯಾಗಿ ಖ್ಯಾತಿ ಮತ್ತು ಪ್ರಮುಖ ಪಾತ್ರದಲ್ಲಿ ನಿಖಿತಾಸ್ವಾಮಿ ನಟಿಸಿದ್ದಾರೆ. ಇವರ ಜೊತೆಗೆ “ಬಿಗ್ ಬಾಸ್” ಖ್ಯಾತಿಯ ನೀತು, ಬಳ್ಳಾರಿಯ ಚಾಂದಿನಿ, ಮತ್ತು ಹಿರಿಯ ಕಲಾವಿದರಾದ ರಘು ರಾಮನಕೊಪ್ಪ, ದೀಪಕ್ ಶೆಟ್ಟಿ, ವಿಜಯ್ ಚಂಡೂರ್ ಮುಂತಾದವರ ತಾರಾಗಣ ಈ ಚಿತ್ರಕ್ಕಿದೆ. ಪ್ರತಿಯೊಬ್ಬ ಕಲಾವಿದರೂ ತಮ್ಮ ಪಾತ್ರದ ವೈವಿಧ್ಯತೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದು, ಸಿನಿಮಾ ತಂಡದ ಸಹಕಾರದ ಬಗ್ಗೆ ಸಂತಸ ಹಂಚಿಕೊಂಡಿದ್ದಾರೆ.

ತಾಂತ್ರಿಕವಾಗಿಯೂ ಚಿತ್ರ ಉತ್ತಮವಾಗಿ ಮೂಡಿಬಂದಿದ್ದು, ಮಂಜುಕವಿ ಅವರ ಸಂಗೀತ, ಕಿನ್ನಾಳ್ ರಾಜ್ ಅವರ ಸಾಹಿತ್ಯ ಮತ್ತು ಪ್ರದ್ಯೋತನ್ ಅವರ ಹಿನ್ನೆಲೆ ಸಂಗೀತ ಚಿತ್ರದ ಜೀವಾಳವಾಗಿದೆ. ಸ್ವಾಮಿ ಅವರ ಛಾಯಾಗ್ರಹಣ ಹಾಗೂ ಜಗ್ಗು ಮಾಸ್ಟರ್ ಅವರ ನೃತ್ಯ ನಿರ್ದೇಶನದಲ್ಲಿ ದೃಶ್ಯಗಳು ಸೊಗಸಾಗಿ ಬಂದಿವೆ ಎಂದು ತಾಂತ್ರಿಕ ತಂಡ ಭರವಸೆ ನೀಡಿದೆ. ದಯಾಶಂಕರ್ ಅವರು ಈ ಚಿತ್ರಕ್ಕೆ ಚಿತ್ರಕಥೆ ಬರೆದಿದ್ದು, ಶೀರ್ಷಿಕೆಯಿಂದಲೇ ಸದ್ದು ಮಾಡುತ್ತಿರುವ ಈ ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ ಯಾವ ರೀತಿ ಮೋಡಿ ಮಾಡಲಿದೆ ಎಂಬ ನಿರೀಕ್ಷೆ ಮೂಡಿದೆ.


