
ವಿಧಾನಸೌಧದಂತಹ ಅತಿ ಹೆಚ್ಚು ಭದ್ರತೆ ಇರುವ ಪ್ರದೇಶದಲ್ಲಿ ನಡೆದ ಈ ನಿಗೂಢ ಬ್ಯಾಗ್ ನಾಪತ್ತೆ ಪ್ರಕರಣ ಹಾಗೂ ಗನ್ ಹಿಡಿದು ವಿವಾದಕ್ಕೀಡಾದ ಕಾಂಗ್ರೆಸ್ ಮುಖಂಡನ ಬಗ್ಗೆ ಗೃಹ ಸಚಿವರು ಸ್ಪಷ್ಟನೆ ನೀಡಿದ್ದಾರೆ.

ಪ್ರಕರಣದ ಆಳವಾದ ತನಿಖೆಗಾಗಿ ಜಂಟಿ ಪೊಲೀಸ್ ಆಯುಕ್ತರ ನೇತೃತ್ವದಲ್ಲಿ ತಂಡ ರಚಿಸಿ ಆದೇಶಿಸಲಾಗಿದೆ , ಕಳುವಿಗಿಂತಲೂ ಹೆಚ್ಚಾಗಿ ಭದ್ರತಾ ಲೋಪದ ಬಗ್ಗೆ ಗೃಹ ಸಚಿವರು ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ವಿಧಾನಸೌಧದ ಗೇಟ್‌ನಿಂದ ಆ ಬ್ಯಾಗ್ ಹೇಗೆ ಮತ್ತು ಯಾರ ಕಣ್ಣಿಗೂ ಬೀಳದೆ ಒಳಗೆ ಹೋಯಿತು? ಒಬ್ಬ ಸಚಿವರ ಕೊಠಡಿಯವರೆಗೆ ಬ್ಯಾಗ್ ತಲುಪಿದೆ ಎಂದರೆ ಅದರ ಹಿಂದೆ ಯಾರಿದ್ದಾರೆ ಎಂಬುದು ಮುಖ್ಯ. ನವೀನ್ ಎಂಬ ವ್ಯಕ್ತಿ ಬ್ಯಾಗ್ ತಂದಿರುವುದು ಪ್ರಾಥಮಿಕವಾಗಿ ತಿಳಿದುಬಂದಿದೆ. ಬ್ಯಾಗ್ ಒಳಗೆ ಬಂದ ಹಾದಿಯ ಬಗ್ಗೆ ಸೈಬರ್ ಮತ್ತು ಸಿಸಿಟಿವಿ ದೃಶ್ಯಾವಳಿಗಳ ಮೂಲಕ ಪತ್ತೆ ಹಚ್ಚಲು ಸೂಚಿಸಲಾಗಿದೆ ಎಂದರು.

ಕಲಬುರಗಿಯಲ್ಲಿ ‘ದುರಂಧರ್’ ಚಿತ್ರದ ಶೈಲಿಯಲ್ಲಿ ಗನ್ ಹಿಡಿದು ಡಾನ್ಸ್ ಮಾಡಿದ ಕಾಂಗ್ರೆಸ್ ಮುಖಂಡ ಮತೀನ್ ಪಟೇಲ್ ವಿರುದ್ಧವೂ ಕ್ರಮ ಕೈಗೊಳ್ಳುವುದಾಗಿ ಸಚಿವರು ತಿಳಿಸಿದರು. ಯಾರೇ ಆಗಲಿ ಕಾನೂನಿಗೆ ವಿರುದ್ಧವಾಗಿ ನಡೆದರೆ ಕ್ರಮ ಅನಿವಾರ್ಯ. ಅವರು ಯಾವ ಪಕ್ಷದವರು ಅಥವಾ ಯಾರಿಗೆ ಆಪ್ತರು ಎಂಬುದು ಮುಖ್ಯವಲ್ಲ. ಪೊಲೀಸರು ಕಾನೂನಿನ ಅಡಿಯಲ್ಲಿ ಸೂಕ್ತ ಕ್ರಮ ತೆಗೆದುಕೊಳ್ಳಲಿದ್ದಾರೆ ಎಂದು ಸ್ಪಷ್ಟಪಡಿಸಿದರು.

ಪ್ರಕರಣವೊಂದರಲ್ಲಿ ತಲೆಮರೆಸಿಕೊಂಡಿರುವ ಬೈರತಿ ಬಸವರಾಜು ಅವರ ಬಗ್ಗೆ ಮಾತನಾಡಿದ ಅವರು, ಅವರಾಗಿ ಅವರೇ ಬಂದು ಪೊಲೀಸರಿಗೆ ಶರಣಾದರೆ ಒಳಿತು. ಇಲ್ಲದಿದ್ದರೆ ಪೊಲೀಸರೇ ಅವರನ್ನು ಹುಡುಕಿ ಹಿಡಿಯಲಿದ್ದಾರೆ,” ಎಂದು ಎಚ್ಚರಿಕೆ ನೀಡಿದರು.




