ಸಿನಿಮಾ

ಹಾರರ್ ಲೋಕಕ್ಕೆ ಸಂಹಿತಾ ವಿನ್ಯಾ ಎಂಟ್ರಿ; ತೆರೆಕಾಣಲಿದೆ ‘ಮಿಕ್ಸಿಂಗ್ ಪ್ರೀತಿ’ ಸಿನಿಮಾ

ಮಾಡೆಲಿಂಗ್ ಮತ್ತು ಚಿತ್ರರಂಗದಲ್ಲಿ ಗುರುತಿಸಿಕೊಂಡಿರುವ ನಟಿ ಸಂಹಿತಾ ವಿನ್ಯಾ ಈಗ ಮೊದಲ ಬಾರಿಗೆ ಹಾರರ್ ಥ್ರಿಲ್ಲರ್ ಸಿನಿಮಾದ ಮೂಲಕ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದ್ದಾರೆ. ಅವರು ನಟಿಸಿರುವ ‘ಮಿಕ್ಸಿಂಗ್ ಪ್ರೀತಿ’ ಸಿನಿಮಾ ಇದೇ ಫೆಬ್ರವರಿ 20ರಂದು ಬಿಡುಗಡೆಯಾಗಲಿದೆ. ಈ ಚಿತ್ರವು ಕನ್ನಡದಲ್ಲಿ ‘ಮಿಕ್ಸಿಂಗ್ ಪ್ರೀತಿ’ ಹಾಗೂ ತಮಿಳಿನಲ್ಲಿ ‘ಮಿಕ್ಸಿಂಗ್ ಕಾದಲ್’ ಎಂಬ ಶೀರ್ಷಿಕೆಯಲ್ಲಿ ಏಕಕಾಲಕ್ಕೆ ತೆರೆಕಾಣುತ್ತಿರುವುದು ವಿಶೇಷವಾಗಿದೆ. ಪೊಲ್ಲಾಚಿ ಮಹಾಲಿಂಗಂ ಅವರು ಈ ಚಿತ್ರಕ್ಕೆ ನಿರ್ದೇಶನ ಮಾಡಿದ್ದು, ಸಿಂಟೊ ಜೇಕಬ್ ನಾಯಕನಾಗಿ ನಟಿಸಿದ್ದಾರೆ.

ಈ ಸಿನಿಮಾದ ಕಥೆಯು ಒಂದು ರೆಸಾರ್ಟ್ ಸುತ್ತ ಸುತ್ತುತ್ತದೆ. ಮೂವರು ಸ್ನೇಹಿತರು ರೆಸಾರ್ಟ್‌ಗೆ ಹೋದಾಗ ಅವರಿಗೆ ಎದುರಾಗುವ ದೆವ್ವದ ಕಾಟ ಮತ್ತು ಅಲ್ಲಿಂದ ಅವರು ಹೇಗೆ ಪಾರಾಗುತ್ತಾರೆ ಎಂಬುದು ಚಿತ್ರದ ಮುಖ್ಯ ವಸ್ತು. ಹಾರರ್ ಜೊತೆಗೆ ರೊಮ್ಯಾಂಟಿಕ್ ಕಾಮಿಡಿ ಮತ್ತು ಥ್ರಿಲ್ಲರ್ ಅಂಶಗಳನ್ನು ಸಮಪ್ರಮಾಣದಲ್ಲಿ ಬೆರೆಸಲಾಗಿದೆ ಎಂದು ಚಿತ್ರತಂಡ ತಿಳಿಸಿದೆ. ಈ ಚಿತ್ರವನ್ನು ಕೇರಳ, ಚೆನ್ನೈ ಮತ್ತು ಬೆಂಗಳೂರಿನ ಸುಂದರ ಹಾಗೂ ನಿಗೂಢ ತಾಣಗಳಲ್ಲಿ ಚಿತ್ರೀಕರಿಸಲಾಗಿದೆ. ರಾತ್ರಿ ವೇಳೆ ಚಿತ್ರೀಕರಣ ನಡೆಸುವಾಗ ನೈಜ ಹಾರರ್ ಅನುಭವವಾಯಿತು ಎಂದು ನಾಯಕಿ ಸಂಹಿತಾ ವಿನ್ಯಾ ತಮ್ಮ ಅನುಭವ ಹಂಚಿಕೊಂಡಿದ್ದಾರೆ.

ಸಂಹಿತಾ ವಿನ್ಯಾ ಅವರು ಈವರೆಗೆ 18ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದು, 75ಕ್ಕೂ ಅಧಿಕ ಫ್ಯಾಷನ್ ಶೋಗಳಲ್ಲಿ ಶೋಸ್ಟಾಪರ್ ಆಗಿ ಮಿಂಚಿದ್ದಾರೆ. ‘ಮೆಜೆಸ್ಟಿಕ್ 2’, ‘ಆಯುಧ’, ‘ಜಿಎಸ್‌ಟಿ’ ಸೇರಿದಂತೆ ಹಲವು ಚಿತ್ರಗಳಲ್ಲಿ ಇವರು ಅಭಿನಯಿಸಿದ್ದಾರೆ. ‘ಮಿಕ್ಸಿಂಗ್ ಪ್ರೀತಿ’ ಚಿತ್ರದಲ್ಲಿ ಪ್ರಿಯಾ ಪವನ್ ಹಾಗೂ ದಿವ್ಯ ಜಸ್ಮಿತಾ ಕೂಡ ಪ್ರಮುಖ ಪಾತ್ರಗಳಲ್ಲಿದ್ದಾರೆ. ರಾಜೇಶ್ ಮೋಹನ್ ಮತ್ತು ಗಣೇಶ್ವರನ್ ಸಂಗೀತ ನೀಡಿದ್ದು, ಸಾಧಿಕ್ ಕಬೀರ್ ಛಾಯಾಗ್ರಹಣ ನಿರ್ವಹಿಸಿದ್ದಾರೆ. ವಿಭಿನ್ನ ಪಾತ್ರಗಳ ಮೂಲಕ ಗುರುತಿಸಿಕೊಳ್ಳುತ್ತಿರುವ ಸಂಹಿತಾ ಅವರಿಗೆ ಈ ಹಾರರ್ ಸಿನಿಮಾ ಹೊಸ ತಿರುವು ನೀಡುವ ನಿರೀಕ್ಷೆಯಿದೆ.

Comments (0)

Your email address will not be published. Required fields are marked *

Back to top button