Top Newsಸುದ್ದಿ

ಕರ್ತವ್ಯದ ವೇಳೆ ಮೃತಪಟ್ಟ ಬೆಸ್ಕಾಂ ಸಿಬ್ಬಂದಿ ಕುಟುಂಬಕ್ಕೆ ತಲಾ 1 ಕೋಟಿ ರೂ. ಪರಿಹಾರ

ಕರ್ತವ್ಯದ ವೇಳೆ ಮಡಿದ ಬೆಸ್ಕಾಂನ ಮೂವರು ಸಿಬ್ಬಂದಿಯ ಕುಟುಂಬಸ್ಥರಿಗೆ ಇಂಧನ ಸಚಿವ ಕೆ.ಜೆ. ಜಾರ್ಜ್ ಅವರು ತಲಾ ಒಂದು ಕೋಟಿ ರೂಪಾಯಿಗಳ ಪರಿಹಾರದ ಚೆಕ್ ವಿತರಿಸುವ ಮೂಲಕ ಸರ್ಕಾರದ ನೆರವಿನ ಹಸ್ತ ಚಾಚಿದ್ದಾರೆ. ಬೆಸ್ಕಾಂ ಕಾರ್ಪೋರೇಟ್ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಂತ್ರಸ್ತ ಕುಟುಂಬಗಳನ್ನು ಭೇಟಿಯಾದ ಸಚಿವರು, ಮೃತರ ಕುಟುಂಬದವರಿಗೆ ವಿಮಾ ಸಹಾಯವಾಗಿ ಚೆಕ್‌ಗಳನ್ನು ಹಸ್ತಾಂತರಿಸಿದರು.

ವಿದ್ಯುದಾಘಾತ ಹಾಗೂ ರಸ್ತೆ ಅಪಘಾತಗಳಲ್ಲಿ ಪ್ರಾಣ ಕಳೆದುಕೊಂಡ ಮೂವರು ಸಿಬ್ಬಂದಿಗಳ ಪತ್ನಿಯರು ಈ ಪರಿಹಾರವನ್ನು ಸ್ವೀಕರಿಸಿದರು. ವಿದ್ಯುದಾಘಾತದಲ್ಲಿ ಮೃತಪಟ್ಟ ಗೌರಿಬಿದನೂರು ಉಪವಿಭಾಗದ ಸಹಾಯಕ ಪವರ್‌ಮ್ಯಾನ್ ಉದಯ್ ಕುಮಾರ್ ಅವರ ಪತ್ನಿ ವಿ. ಕೀರ್ತನಾ, ರಸ್ತೆ ಅಪಘಾತಗಳಲ್ಲಿ ಮೃತರಾದ ಗುಡಿಬಂಡೆ ಉಪವಿಭಾಗದ ಪವರ್‌ಮ್ಯಾನ್ ಬಿ.ವಿ. ಮಂಜಪ್ಪ ಅವರ ಪತ್ನಿ ದಾಕ್ಷಾಯಿಣಿ ಹಾಗೂ ಚಿಂತಾಮಣಿ ಉಪವಿಭಾಗದ ಪವರ್‌ಮ್ಯಾನ್ ಅಮರನಾಥ್ ಅವರ ಪತ್ನಿ ಮುನಿರತ್ನಮ್ಮ ಅವರಿಗೆ ಸಚಿವರು ಚೆಕ್ ವಿತರಿಸಿದರು.

ಇಂಧನ ಇಲಾಖೆಯ ಸಿಬ್ಬಂದಿ, ಅದರಲ್ಲೂ ವಿಶೇಷವಾಗಿ ಲೈನ್‌ಮ್ಯಾನ್‌ಗಳ ಸುರಕ್ಷತೆಗೆ ಸರ್ಕಾರ ಹೆಚ್ಚಿನ ಆದ್ಯತೆ ನೀಡುತ್ತಿದೆ. ಸಿಬ್ಬಂದಿಗೆ ಅಗತ್ಯವಿರುವ ವೈಯಕ್ತಿಕ ರಕ್ಷಣಾ ಸಾಧನಗಳನ್ನು ಒದಗಿಸಲಾಗುತ್ತಿದ್ದರೂ, ಅನಿರೀಕ್ಷಿತವಾಗಿ ನಡೆಯುವ ದುರ್ಘಟನೆಗಳಲ್ಲಿ ಮೃತಪಡುವ ಸಿಬ್ಬಂದಿಯ ಕುಟುಂಬಗಳಿಗೆ ಆರ್ಥಿಕ ಭದ್ರತೆ ಒದಗಿಸುವುದು ಇಲಾಖೆಯ ಕರ್ತವ್ಯವಾಗಿದೆ. ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ‘ಸೂಪರ್ ಸ್ಯಾಲರಿ ಅಕೌಂಟ್’ ವಿಮಾ ಯೋಜನೆಯ ಅಡಿಯಲ್ಲಿ ಈ ಮಹತ್ವದ ಪರಿಹಾರ ಮೊತ್ತವನ್ನು ನೀಡಲಾಗಿದೆ ಎಂದರು.

ಇಂಧನ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತ, ಕೆಪಿಟಿಸಿಎಲ್ ವ್ಯವಸ್ಥಾಪಕ ನಿರ್ದೇಶಕ ರಾಮ್ ಪ್ರಸಾತ್ ಮನೋಹರ್, ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಡಾ. ಎನ್. ಶಿವಶಂಕರ ಸೇರಿದಂತೆ ಹಲವು ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.

Comments (0)

Your email address will not be published. Required fields are marked *

Back to top button