ಬೆಂಗಳೂರು : ಆವಲಹಳ್ಳಿಯ ವಿರ್ಟುಸೊ ಅಪಾರ್ಟ್‌ಮೆಂಟ್‌ನಲ್ಲಿ ಇಸ್ರೋ ಸಂಸ್ಥೆಯ ನಿವೃತ್ತ ನೌಕರರೊಬ್ಬರು ತಮ್ಮ ಪತ್ನಿಯನ್ನು ಉಸಿರುಗಟ್ಟಿಸಿ ಕೊಲೆ ಮಾಡಿರುವ ಭೀಕರ ಘಟನೆ ನಡೆದಿದೆ. ಆರೋಪಿ ನಾಗಲೇಶ್ವರ ರಾವ್ ಎಂಬುವವರು ಪತ್ನಿ ಸಂಧ್ಯಾ ಅವರನ್ನು ಹತ್ಯೆ ಮಾಡಿದ್ದು, ಸದ್ಯ ಆವಲಹಳ್ಳಿ ಪೊಲೀಸರು ಆರೋಪಿಯನ್ನು ಬಂಧಿಸಿ ತನಿಖೆ ಕೈಗೊಂಡಿದ್ದಾರೆ. ಪ್ರಾಥಮಿಕ ವಿಚಾರಣೆಯ ವೇಳೆ ಕೊಲೆಗೆ ಸಂಬಂಧಿಸಿದಂತೆ ಅತ್ಯಂತ ಅಚ್ಚರಿಯ ಮತ್ತು ವಿಚಿತ್ರವಾದ ಕಾರಣವೊಂದು ಹೊರಬಿದ್ದಿದೆ.
ತನಿಖೆಯ ವೇಳೆ ಆರೋಪಿ ನಾಗಲೇಶ್ವರ ರಾವ್ ನೀಡಿದ ಹೇಳಿಕೆಯು ಪೊಲೀಸರನ್ನೇ ದಂಗಾಗಿಸಿದೆ. “ನಾನು ಸತ್ತ ಮೇಲೆ ನನ್ನ ಪತ್ನಿಯನ್ನು ನೋಡಿಕೊಳ್ಳುವವರು ಯಾರೂ ಇಲ್ಲ, ನಮ್ಮ ಯಾವ ಸಂಬಂಧಿಕರೂ ನಮಗೆ ಹತ್ತಿರವಿಲ್ಲ. ನನ್ನ ಸಾವಿನ ನಂತರ ಆಕೆಯ ಮುಂದಿನ ಜೀವನ ಹೇಗೆ ಎಂಬ ಆತಂಕ ಕಾಡುತ್ತಿತ್ತು. ಆ ಕಾರಣಕ್ಕಾಗಿಯೇ ಆಕೆಯನ್ನ ಕೊಂದೆ” ಎಂದು ಅವರು ವಿಚಾರಣೆ ವೇಳೆ ಹೇಳಿಕೊಂಡಿದ್ದಾರೆ. ಈ ಹೇಳಿಕೆಗಳ ಹಿನ್ನೆಲೆಯಲ್ಲಿ ಆರೋಪಿಯು ಸದ್ಯ ಮಾನಸಿಕ ಅಸ್ವಸ್ಥರಂತೆ ವರ್ತಿಸುತ್ತಿದ್ದಾರೆ ಎಂದು ತಿಳಿದುಬಂದಿದೆ.
ಮೃತ ದಂಪತಿಯ ಒಬ್ಬಳೇ ಮಗಳು ಅಮೆರಿಕದಲ್ಲಿ ನೆಲೆಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ವೃದ್ಧಾಪ್ಯದ ಒಂಟಿತನ ಮತ್ತು ಭವಿಷ್ಯದ ಬಗೆಗಿನ ಅತಿಯಾದ ಆತಂಕವು ಇಂತಹದೊಂದು ಅಚಾತುರ್ಯಕ್ಕೆ ಕಾರಣವಾಗಿರಬಹುದು ಎಂದು ಶಂಕಿಸಲಾಗಿದೆ. ಸದ್ಯ ಆವಲಹಳ್ಳಿ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದ್ದು, ಪೊಲೀಸರು ಘಟನೆಯ ಹಿಂದಿನ ನಿಖರ ಕಾರಣಗಳ ಬಗ್ಗೆ ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.


