Top Newsದೇಶ/ವಿದೇಶಸುದ್ದಿ

ಆರ್‌ಕಾಂ ವಂಚನೆ ಪ್ರಕರಣ; ಅನುಮತಿ ಇಲ್ಲದೆ ವಿದೇಶಕ್ಕೆ ಹೋಗಲ್ಲ ಎಂದ ಅನಿಲ್ ಅಂಬಾನಿ

ಉದ್ಯಮಿ ಅನಿಲ್ ಅಂಬಾನಿ ರಿಲಯನ್ಸ್ ಕಮ್ಯುನಿಕೇಷನ್ಸ್ ಸಮೂಹದ ಸಾಲದ ಅಕ್ರಮ ಹಾಗೂ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ಗೆ ಪ್ರಮುಖ ಮುಚ್ಚಳಿಕೆ ಸಲ್ಲಿಸಿದ್ದಾರೆ. ತಾನು ನ್ಯಾಯಾಲಯದ ಪೂರ್ವಾನುಮತಿ ಇಲ್ಲದೆ ಭಾರತವನ್ನು ತೊರೆಯುವುದಿಲ್ಲ ಮತ್ತು ಜಾರಿ ನಿರ್ದೇಶನಾಲಯ ಹಾಗೂ ಸಿಬಿಐ ನಡೆಸುತ್ತಿರುವ ತನಿಖೆಗೆ ಸಂಪೂರ್ಣ ಸಹಕಾರ ನೀಡುತ್ತೇನೆ ಎಂದು ತಿಳಿಸಿದ್ದಾರೆ. ಕೇಂದ್ರ ಸರ್ಕಾರದ ನಿವೃತ್ತ ಕಾರ್ಯದರ್ಶಿ ಇಎಎಸ್ ಶರ್ಮಾ ಅವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ಹಿನ್ನೆಲೆಯಲ್ಲಿ ಈ ಬೆಳವಣಿಗೆ ನಡೆದಿದೆ.

ರಿಲಯನ್ಸ್ ಕಮ್ಯುನಿಕೇಷನ್ಸ್ ಮತ್ತು ಅದರ ಅಂಗಸಂಸ್ಥೆಗಳು 2013ರಿಂದ 2017ರ ಅವಧಿಯಲ್ಲಿ ಎಸ್‌ಬಿಐ ನೇತೃತ್ವದ ಬ್ಯಾಂಕ್‌ಗಳ ಒಕ್ಕೂಟದಿಂದ ಸುಮಾರು 31,580 ಕೋಟಿ ರೂ. ಸಾಲ ಪಡೆದಿದ್ದವು. ಈ ಹಣವನ್ನು ಸಂಬಂಧವೇ ಇಲ್ಲದ ಸಾಲಗಳ ಮರುಪಾವತಿಗೆ ಬಳಸಿರುವುದು ಮತ್ತು ಆವರ್ತನೀಯ ವಹಿವಾಟುಗಳ ಮೂಲಕ ನಿಧಿ ದುರುಪಯೋಗಪಡಿಸಿರುವುದು ವಿಶೇಷ ಲೆಕ್ಕಪರಿಶೋಧನೆಯಲ್ಲಿ ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ ವಿದೇಶಿ ವಿನಿಮಯ ನಿರ್ವಹಣಾ ಕಾಯಿದೆ ಮತ್ತು ಅಕ್ರಮ ಹಣ ವರ್ಗಾವಣೆ ತಡೆ ಕಾಯಿದೆ ಅಡಿ ತನಿಖೆ ಚುರುಕುಗೊಂಡಿದೆ.

ಅನಿಲ್ ಅಂಬಾನಿ ಅವರು ನ್ಯಾಯಾಲಯಕ್ಕೆ ನೀಡಿರುವ ಸ್ಪಷ್ಟನೆಯಲ್ಲಿ, ತಾನು ಕಂಪನಿಗಳಲ್ಲಿ ಕೇವಲ ಕಾರ್ಯನಿರ್ವಹಣೇತರ ಜವಾಬ್ದಾರಿಯನ್ನಷ್ಟೇ ಹೊಂದಿದ್ದು, ದೈನಂದಿನ ವ್ಯವಹಾರಗಳಲ್ಲಿ ಭಾಗಿಯಾಗಿಲ್ಲ ಎಂದು ಹೇಳಿದ್ದಾರೆ. ಅಲ್ಲದೆ, 2025ರ ಜುಲೈನಿಂದ ತಾನು ಭಾರತವನ್ನು ಬಿಟ್ಟು ಹೋಗಿಲ್ಲ ಮತ್ತು ಮುಂದಿನ ದಿನಗಳಲ್ಲಿ ವಿದೇಶ ಪ್ರಯಾಣದ ಅಗತ್ಯವಿದ್ದಲ್ಲಿ ಮುಂಚಿತವಾಗಿ ಅನುಮತಿ ಪಡೆಯುವುದಾಗಿ ಭರವಸೆ ನೀಡಿದ್ದಾರೆ. ಪ್ರ

ಈ ಬೃಹತ್ ವಂಚನೆ ಪ್ರಕರಣದಲ್ಲಿ ಬ್ಯಾಂಕ್ ಅಧಿಕಾರಿಗಳ ಶಾಮೀಲಾತಿ ಇದೆಯೇ ಎಂಬ ಬಗ್ಗೆ ಪರಿಶೀಲಿಸುವಂತೆ ಸಿಬಿಐಗೆ ಸುಪ್ರೀಂ ಕೋರ್ಟ್ ಸೂಚಿಸಿದೆ. ಅಷ್ಟೇ ಅಲ್ಲದೆ, ಫೆಬ್ರವರಿ 4ರಂದು ನೀಡಿದ ಆದೇಶದಲ್ಲಿ, ಈ ಗಂಭೀರ ಆರೋಪಗಳ ತನಿಖೆಗಾಗಿ ವಿಶೇಷ ತನಿಖಾ ತಂಡವನ್ನು ರಚಿಸಲು ಇ.ಡಿಗೆ ನಿರ್ದೇಶನ ನೀಡಿದೆ. ಸಾರ್ವಜನಿಕ ಹಣದ ಬೃಹತ್ ಮೊತ್ತವನ್ನು ಒಳಗೊಂಡಿರುವ ಈ ಪ್ರಕರಣದಲ್ಲಿ ನಿಷ್ಪಕ್ಷಪಾತ ತನಿಖೆ ನಡೆಯಲು ನ್ಯಾಯಾಲಯವು ನೇರ ಮೇಲ್ವಿಚಾರಣೆ ವಹಿಸಿದೆ.

Comments (0)

Your email address will not be published. Required fields are marked *

Back to top button