Top Newsಜಿಲ್ಲೆಸುದ್ದಿ

ರಾಜನಹಳ್ಳಿ ವಾಲ್ಮೀಕಿ ಪ್ರಸನ್ನಾನಂದ ಪುರಿ ಶ್ರೀಗಳಿಗೆ ಲಘು ಹೃದಯಾಘಾತ

ರಾಯಚೂರು : ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಜಗದ್ಗುರುಗಳಾದ ಶ್ರೀ ಡಾ. ವಾಲ್ಮೀಕಿ ಪ್ರಸನ್ನಾನಂದ ಪುರಿ ಸ್ವಾಮೀಜಿಯವರು ರಾಯಚೂರು ಜಿಲ್ಲಾ ಪ್ರವಾಸದಲ್ಲಿದ್ದ ಸಂದರ್ಭದಲ್ಲಿ ಲಘು ಹೃದಯಾಘಾತಕ್ಕೆ ಒಳಗಾಗಿದ್ದು ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಪ್ರಾಥಮಿಕ ಚಿಕಿತ್ಸೆಯ ನಂತರ ವೈದ್ಯರ ಸಲಹೆಯ ಮೇರೆಗೆ ಸ್ವಾಮೀಜಿಯವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಹೈದರಾಬಾದ್‌ನ ಅಪೋಲೋ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದ್ದು, ಅಲ್ಲಿ ಅವರಿಗೆ ತಜ್ಞ ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ. ಪ್ರಸ್ತುತ ಚಿಕಿತ್ಸೆಗೆ ಸ್ಪಂದಿಸಿರುವ ಶ್ರೀಗಳು ಚೇತರಿಸಿಕೊಳ್ಳುತ್ತಿದ್ದಾರೆ ಎಂದು ತಿಳಿದುಬಂದಿದೆ.ತಮ್ಮ ಪ್ರವಾಸದ ಅಂಗವಾಗಿ ಸ್ವಾಮೀಜಿಯವರು ಯಾದಗಿರಿಯ ಬಂಡೊಳ್ಳಿ ವಾಲ್ಮೀಕಿ ಪೀಠದ ಸ್ಥಳ ಹಾಗೂ ರಾಯಚೂರಿನ ತಿಂಥಣಿ ಕನಕಗುರು ಪೀಠಕ್ಕೆ ಭೇಟಿ ನೀಡಿದ್ದರು. ಈ ಕಾರ್ಯಕ್ರಮಗಳ ಮುಕ್ತಾಯದ ನಂತರ ಲಿಂಗಸುಗೂರಿನ ಹಟ್ಟಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ಮತ್ತೊಂದು ಕಾರ್ಯಕ್ರಮಕ್ಕೆ ತೆರಳುತ್ತಿದ್ದ ವೇಳೆ ಈ ಆರೋಗ್ಯ ಸಮಸ್ಯೆ ಕಾಣಿಸಿಕೊಂಡಿದೆ.

ಶ್ರೀಗಳು ರಾಯಚೂರಿನ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಸುದ್ದಿ ತಿಳಿಯುತ್ತಿದ್ದಂತೆಯೇ ಸಚಿವ ಎನ್.ಎಸ್. ಬೋಸರಾಜು, ಶಾಸಕರಾದ ಬಸನಗೌಡ ದದ್ದಲ್, ಶಿವರಾಜ್ ಪಾಟೀಲ್ ಹಾಗೂ ಮಾಜಿ ಸಂಸದ ಬಿ.ವಿ. ನಾಯಕ್ ಅವರು ಆಸ್ಪತ್ರೆಗೆ ಭೇಟಿ ನೀಡಿ ಜಗದ್ಗುರುಗಳ ಆರೋಗ್ಯ ವಿಚಾರಿಸಿದ್ದಾರೆ. ಸದ್ಯ ಹೈದರಾಬಾದ್‌ನಲ್ಲಿ ಚಿಕಿತ್ಸೆ ಮುಂದುವರಿದಿದ್ದು, ಭಕ್ತರು ಹಾಗೂ ಅನುಯಾಯಿಗಳು ಶ್ರೀಗಳು ಶೀಘ್ರ ಗುಣಮುಖರಾಗಲೆಂದು ಹಾರೈಸುತ್ತಿದ್ದಾರೆ.

Comments (0)

Your email address will not be published. Required fields are marked *

Back to top button