ರಾಜ್ಯಪಾಲರು ಬಾಕಿ ಇರುವ ಪ್ರಕರಣಗಳ ವಿಚಾರಣೆಗೆ ಅನುಮತಿ ನೀಡುವಂತೆ ಆಗ್ರಹಿಸಿ ಆಗಸ್ಟ್ 31ರಂದು ರಾಜಭವನ ಚಲೋ: ಡಿಸಿಎಂ ಡಿ.ಕೆ ಶಿವಕುಮಾರ್

ಬೆಂಗಳೂರು, ಆಗಸ್ಟ್ 27

“ಘನತೆವೆತ್ತ ರಾಜ್ಯಪಾಲರು ಕೇಂದ್ರ ಸಚಿವ ಕುಮಾರಸ್ವಾಮಿ, ಮಾಜಿ ಸಚಿವರಾದ ಮುರುಗೇಶ್ ನಿರಾಣಿ, ಜನಾರ್ದನ ರೆಡ್ಡಿ ಹಾಗೂ ಶಶಿಕಲಾ ಜೊಲ್ಲೆ ಸೇರಿದಂತೆ ತಮ್ಮ ಮುಂದೆ ವಿಚಾರಣೆಗೆ ಅನುಮತಿ ಕೋರಿ ಬಾಕಿ ಇರುವ ಪ್ರಕರಣಗಳಲ್ಲೂ ಅನುಮತಿ ನೀಡಬೇಕು ಎಂದು ಮನವಿ ಮಾಡಲು ಕಾಂಗ್ರೆಸ್ ಪಕ್ಷದ ವತಿಯಿಂದ ಆಗಸ್ಟ್ 31ರಂದು ರಾಜಭವನ ಚಲೋ ಹಮ್ಮಿಕೊಳ್ಳಲಾಗಿದೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತಿಳಿಸಿದರು.

ಕೆಪಿಸಿಸಿ ಕಚೇರಿಯಲ್ಲಿ ಮಾಧ್ಯಮಗೋಷ್ಠಿಯನ್ನು ಉದ್ದೇಶಿಸಿ ಮಂಗಳವಾರ ಮಾತನಾಡಿದ ಶಿವಕುಮಾರ್ ಅವರು, “ನಮ್ಮ ಬಿಗ್ ಬ್ರದರ್, ಪ್ರಾಮಾಣಿಕ ಕುಮಾರಸ್ವಾಮಿ ಅವರ ವಿರುದ್ಧ ಅಕ್ರಮವಾಗಿ ಗಣಿಗಾರಿಕೆಗೆ ಮಂಜೂರು ಮಾಡಿದ ಪ್ರಕರಣವೂ ರಾಜ್ಯಪಾಲರ ಮುಂದಿದೆ. ಲೋಕಾಯುಕ್ತ ಸಂಸ್ಥೆಯು ಸುದೀರ್ಘ 10 ವರ್ಷಗಳ ತನಿಖೆ ನಡೆಸಿ ಕುಮಾರಸ್ವಾಮಿ ಅವರ ವಿಚಾರಣೆಗೆ ಅನುಮತಿ ಕೋರಿದ್ದಾರೆ. ಆದರೂ ವಿಚಾರಣೆಗೆ ಅನುಮತಿ ನೀಡಿಲ್ಲ. ಕುಮಾರಸ್ವಾಮಿ ಅವರು ಎಂದಿಗೂ ನಕಲಿ ಕೆಲಸ ಮಾಡುವುದಿಲ್ಲ ಕೇವಲ ಅಸಲಿ ಕೆಲಸ ಮಾಡುವವರು” ಎಂದು ಲೇವಡಿ ಮಾಡಿದರು.

“ಆಗಸ್ಟ್ 31ರ ಬೆಳಗ್ಗೆ 10 ಗಂಟೆಗೆ ವಿಧಾನಸೌಧದ ಗಾಂಧಿ ಪ್ರತಿಮೆಯಿಂದ ರಾಜಭವನಕ್ಕೆ ತೆರಲಿ ಮನವಿ ಸಲ್ಲಿಸಲಾಗುವುದು. ಈ ವೇಳೆ ಮುಖ್ಯಮಂತ್ರಿಗಳು, ಎಲ್ಲಾ ಸಚಿವರು, ಕಾಂಗ್ರೆಸ್ ಶಾಸಕರು, ವಿಧಾನಪರಿಷತ್ ಸದಸ್ಯರು ಹಾಗೂ ಸಂಸದರು ಉಪಸ್ಥಿತರಿರಲಿದ್ದಾರೆ” ಎಂದು ತಿಳಿಸಿದರು.

“ರಾಜ್ಯಪಾಲರು ಬೇರೆ ನಾಯಕರ ವಿರುದ್ಧ ಪ್ರಾಥಮಿಕ ತನಿಖೆ ನಡೆದು ವಿಚಾರಣೆಗೆ ಅನುಮತಿ ಕೇಳಿದ್ದರೂ ನೀಡಿಲ್ಲ. ಆದರೆ ಯಾವುದೇ ಪ್ರಾಥಮಿಕ ತನಿಖೆ ನಡೆಯದಿದ್ದರೂ ರಾಜ್ಯಪಾಲರು ಮಾನ್ಯ ಮುಖ್ಯಮಂತ್ರಿಗಳ ವಿರುದ್ಧ ವಿಚಾರಣೆಗೆ ತರಾತುರಿಲ್ಲಿ ಅನುಮತಿ ನೀಡಿದ್ದಾರೆ. ಹೀಗಾಗಿ ಕಳೆದ ವಾರ ನನ್ನ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಮಾನ್ಯ ರಾಜ್ಯಪಾಲರಿಗೆ ಕೆಲವು ಸಲಹೆಗಳನ್ನು ಕಳುಹಿಸಿದ್ದೆವು. ರಾಜ್ಯಾಪಾಲರು ಬಹಳ ತರಾತುರಿಯಲ್ಲಿ ಮುಖ್ಯಮಂತ್ರಿಗಳ ವಿರುದ್ಧ ವಿಚಾರಣೆಗೆ ಅನುಮತಿ ನೀಡಿದ್ದಾರೆ. ಯಾವುದೇ ಪ್ರಾಥಮಿಕ ತನಿಖೆ ಇಲ್ಲದೇ, ಕೆಲವು ದೂರುಗಳನ್ನು ಆಧರಿಸಿ ಸಿಎಂ ವಿರುದ್ಧ ವಿಚಾರಣೆಗೆ ಅನುಮತಿ ನೀಡಿದ್ದಾರೆ. ಈ ವಿಚಾರ ನ್ಯಾಯಾಲಯದಲ್ಲಿದ್ದು ಈ ಬಗ್ಗೆ ಹೆಚ್ಚಿನ ವಿಚಾರ ಪ್ರಸ್ತಾಪ ಮಾಡುವುದಿಲ್ಲ. ನ್ಯಾಯಾಲಯ ಕಾನೂನಿನ ಪ್ರಕಾರ ಯಾವ ತೀರ್ಮಾನ ಮಾಡಬೇಕೋ ಮಾಡಲಿದೆ” ಎಂದರು.

ಪ್ರಾಮಾಣಿಕ ಕುಮಾರಸ್ವಾಮಿ ನಕಲಿ ಕೆಲಸ ಮಾಡುವುದಿಲ್ಲ:

ರಾಜ್ಯದಲ್ಲಿ ಈಗಾಗಲೇ ವಿವಿಧ ಪ್ರಕರಣಗಳಿಗೆ ಸಂಬಂಧಿಸಿದಂತೆ ಲೋಕಾಯುಕ್ತ ಹಾಗೂ ಇತರೆ ಎಸ್ಐಟಿಗಳಿಂದ ರಾಜ್ಯಪಾಲರ ಬಳಿ ವಿಚಾರಣೆಗೆ ಅನುಮತಿ ನೀಡಿ ಎಂದು ಮನವಿ ಮಾಡಿರುವುದನ್ನು ಅವರ ಗಮನಕ್ಕೆ ತಂದಿದ್ದೇವೆ. ಈ ಪ್ರಕರಣಗಳಲ್ಲಿ ಪ್ರಾಥಮಿಕ ತನಿಖೆಯಾಗಿ ಆರೋಪಪಟ್ಟಿ ಸಮೇತ ಅರ್ಜಿ ಸಲ್ಲಿಸಿರುವ ಬಗ್ಗೆ ಮಾಹಿತಿ ನೀಡಿದ್ದಾರೆ.

ದಿನಾಂಕ 21-11-2023ರಂದು ಲೋಕಾಯುಕ್ತ ಐಜಿಪಿ ಎಸ್ಐಟಿ ಅವರು ರಾಜ್ಯಪಾಲರಿಗೆ ಪತ್ರ ಬರೆದು, “2014ರಲ್ಲಿ ದಾಖಲಾದ ಪ್ರಕರಣ ಅಂದರೆ 10 ವರ್ಷಗಳ ಹಿಂದಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಸೆಕ್ಷನ್ 420, 465, 468, 409, 120ಬಿ, ಐಪಿಸಿ 511, 13/2, ಸೇರಿದಂತೆ ವಿವಿಧ ಕಾಯ್ದೆ ಅಡಿ ಅಕ್ರಮ ಕಬ್ಬಿಣ ಅದಿರು ಮಂಜೂರು ಪ್ರಕರಣಕ್ಕೆ ಸಂಬಂಧಿಸಿದಂತೆ 2014ರಲ್ಲಿ ದಾಖಲಾದ ಪ್ರಕರಣದ ಸಂಪೂರ್ಣ ತನಿಖೆ ಮುಗಿದಿದ್ದು, ಈ ವರದಿ ಆಧಾರಿಸಿ ಈ ಪ್ರಕರಣ ಸಂಬಂಧ ಕುಮಾರಸ್ವಾಮಿ ಅವರ ವಿರುದ್ಧ ತನಿಖೆಗೆ ಅನುಮತಿ ನೀಡಬೇಕು. ಈ ಪ್ರಕರಣದ 218 ಪುಟಗಳ ತನಿಖಾ ವರದಿಯನ್ನು ಈ ಪತ್ರದ ಜತೆಗೆ ಕಳುಹಿಸಿ ಕೊಡಲಾಗಿದೆ” ಎಂದು ಮನವಿ ಮಾಡಿದ್ದರು.

ಇನ್ನು ಮಾಜಿ ಸಚಿವೆ ಶಶಿಕಲಾ ಜೊಲ್ಲೆ ಅವರ ವಿರುದ್ಧದ ಪ್ರಕರಣದಲ್ಲೂ ಆರ್ಟಿಕಲ್ 17a ಪ್ರಕಾರ ಅವರ ವಿಚಾರಣೆಗೆ ಅನುಮತಿ ನೀಡಬೇಕು ಎಂದು ಲೋಕಾಯುಕ್ತ ಸಂಸ್ಥೆ ಮನವಿ ಮಾಡಿತ್ತು. ಇನ್ನು ಮಾಜಿ ಸಚಿವ ಮುರುಗೇಶ್ ನಿರಾಣಿ ಅವರ ವಿರುದ್ಧದ ಪ್ರಕರಣದಲ್ಲೂ ಪ್ರಾಥಮಿಕ ವಿಚಾರಣೆ ನಡೆದಿದ್ದು, ಅವರ ವಿಚಾರಣೆ ನಡೆಸಲು ಅನುಮತಿ ನೀಡಬೇಕು ಎಂದು ಮನವಿ ಮಾಡಲಾಗಿದೆ. ಜನಾರ್ದನ ರೆಡ್ಡಿ ಅವರ ವಿರುದ್ಧ ಡಿಎ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಅನುಮತಿ ನೀಡಿ ಎಂದು ಕೋರಲಾಗಿದೆ. ಈ ಎಲ್ಲಾ ಪ್ರಕರಣಗಳಲ್ಲೂ ಪ್ರಾಥಮಿಕ ತನಿಖೆ ನಡೆದಿದೆ.

ನಕಲಿ ಸಹಿ ಬಗ್ಗೆ ಯಾಕಪ್ಪ ದೂರು ನೀಡಿಲ್ಲ?

“ಈ ಮಧ್ಯೆ ಸತ್ಯಕ್ಕೆ ಹೆಸರಾದ ನಮ್ಮ ರಾಷ್ಟ್ರದ ಉಕ್ಕು ಸಚಿವ ಕುಮಾರಸ್ವಾಮಿ ಅವರು ಮಾಧ್ಯಮಗಳಲ್ಲಿ ‘ಅದು ತನ್ನ ಸಹಿಯೇ ಅಲ್ಲ’ ಎಂದು ಹೇಳಿಕೆ ನೀಡಿರುವುದನ್ನು ನೋಡಿದೆ. ಕುಮಾರಸ್ವಾಮಿ ಅವರ ವಿರುದ್ಧದ ಪ್ರಕರಣದಲ್ಲಿ ಸುಮಾರು 10 ವರ್ಷ ತನಿಖೆ ನಡೆದಿದೆ. ಈ ಪ್ರಕರಣದಲ್ಲಿ ಜಾಮೀನು ಕೂಡ ಪಡೆದಿದ್ದೇನೆ ಎಂದು ಹೇಳಿರುವುದನ್ನೂ ಗಮನಿಸಿದ್ದೇನೆ.

ನಾನು ಅವರ ಕುಟುಂಬ ಹಾಗೂ ಸಹೋದರನ ಆಸ್ತಿ ಬಗ್ಗೆ ಅನೇಕ ಪ್ರಶ್ನೆ ಕೇಳಿದ್ದೆ. ಈವರೆಗೂ ಅವರು ಅದಕ್ಕೆ ಉತ್ತರ ನೀಡಿಲ್ಲ. ನನ್ನ ಕುಟುಂಬದ ಸುದ್ದಿಗೆ ಬರುತ್ತೀಯಾ ಎಂದೆಲ್ಲಾ ಅವರು ಕಿಡಿಕಾರಿದ್ದಾರೆ. ಅವರು ಕೂಡ ಯಾರ ಕುಟುಂಬದ ವಿಚಾರಕ್ಕೆ ಹೋಗಿದ್ದಾರೆ ಎಂಬುದನ್ನು ಹೇಳಬೇಕು. ಅವರು ಹೇಗೆ ಬೇರೆಯವರ ಕುಟುಂಬದ ವಿಚಾರಕ್ಕೆ ಹೋಗುತ್ತಾರೋ, ಅದೇ ರೀತಿ ಬೇರೆಯವರು ಅವರ ಕುಟುಂಬದ ವಿಚಾರಕ್ಕೆ ಹೋಗುತ್ತಾರೆ” ಎಂದು ತಿರುಗೇಟು ಕೊಟ್ಟರು.

“ಅಕ್ರಮವಾಗಿ ಅದಿರು ಭೂಮಿ ಮಂಜೂರು ಪ್ರಕರಣದಲ್ಲಿ ನಾನು ಯಾರಿಗೂ ಶಿಫಾರಸ್ಸು ಮಾಡಿಲ್ಲ ಎಂದು ಕುಮಾರಸ್ವಾಮಿ ಅವರು ಹೇಳಿದ್ದಾರೆ. ಸರಿ, ನೀವು ಯಾರಿಗೂ ಶಿಫಾರಸ್ಸು ಮಾಡಿಲ್ಲವಾದರೆ ಹಾಗೂ ನಿಮ್ಮ ಸಹಿಯನ್ನು ಬೇರೆಯವರು ನಕಲು ಮಾಡಿದ್ದರೆ ಈ ಬಗ್ಗೆ ನೀವು ಇದದುವರೆಗೂ ಯಾಕೆ ದೂರು ನೀಡಿಲ್ಲ? ಮುಖ್ಯಮಂತ್ರಿಗಳ ಬಳಿ ದೂರು ನೀಡಲು ಆಗದಿದ್ದರೆ ಯಾವುದಾದರೂ ಪೊಲೀಸ್ ಠಾಣೆಯಲ್ಲಾದರೂ ದೂರು ನೀಡಬಹುದಲ್ಲವೇ? ಮುಖ್ಯಮಂತ್ರಿ ಸ್ಥಾನದಲ್ಲಿ ಕೂತವರ ಸಹಿ ನಕಲು ಮಾಡಿದವರನ್ನು, ನಕಲು ಸಹಿ ಆಧಾರದ ಮೇಲೆ ಗಣಿಗೆ ಮಂಜೂರು ಮಾಡಿರುವವರ ವಿರುದ್ಧ ಕ್ರಮಕೈಗೊಳ್ಳಬಹುದಲ್ಲವೇ?” ಎಂದು ಪ್ರಶ್ನಿಸಿದರು.

“ಕುಮಾರಸ್ವಾಮಿ ಅವರು ಶ್ರೀ ಸಾಯಿ ವೆಂಕಟೇಶ್ವರ ಮಿನರಲ್ಸ್ ಸಂಸ್ಥೆಗೆ ಗಣಿ ಮಂಜೂರು ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ಜಾಮೀನು ಅರ್ಜಿ ಹಾಕಿಕೊಳ್ಳುತ್ತಾರೆ. ಆ ಸಂದರ್ಭದಲ್ಲಿ ಅವರು ತಮ್ಮ ಅಫಿಡವಿಟ್ ನಲ್ಲಿ ಈ ಜಮೀನನ್ನು ಶ್ರೀಸಾಯಿ ವೆಂಕಟೇಶ್ವರ ಮಿನರಲ್ಸ್ ಸಂಸ್ಥೆಗೆ ಮಂಜೂರು ಮಾಡಿರುವುದಾಗಿ ತಾವೇ ಒಪ್ಪಿಕೊಂಡಿದ್ದಾರೆ. ಅಲ್ಲದೆ ಈ ಪ್ರಕರಣಕ್ಕೆ ಸಂಬಂಧಿಸಿದಂತೆ 2011ರಲ್ಲೇ ಎಫ್ಐಆರ್ ದಾಖಲಾಗಿದ್ದು, ಈ ಪ್ರಕರಣದ ತನಿಖೆ ಬಾಕಿ ಇದೆ ಎಂದು ಒಪ್ಪಿಕೊಂಡಿದ್ದಾರೆ. ಕುಮಾರಸ್ವಾಮಿ ಅವರೇ ಈ ಸಹಿ ನಿಮ್ಮದಲ್ಲವಾದರೆ, ನ್ಯಾಯಾಲಯದಲ್ಲಿ ಜಾಮೀನು ಪಡೆಯಲು ಆ ಆದೇಶವನ್ನು ನೀವೇ ನೀಡಿರುವುದಾಗಿ ಒಪ್ಪಿಕೊಂಡಿರುವುದೇಕೆ?” ಎಂದು ಪ್ರಶ್ನಿಸಿದರು.

“ಮಿಸ್ಟರ್ ಕುಮಾರಸ್ವಾಮಿ ನೀವು ಸಂವಿಧಾನದ ಹೆಸರಲ್ಲಿ ಪ್ರಮಾಣ ಸ್ವೀಕರಿಸಿ ಕೇಂದ್ರದ ಮಂತ್ರಿಯಾಗಿದ್ದೀರಿ. ಅಂದು ನ್ಯಾಯಾಲಯದ ಮುಂದೆ ಈ ಆದೇಶ ಮಾಡಿರುವುದು ನೀವೇ ಎಂದು ಹೇಳಿದ್ದು, ಇಂದು ಮಾಧ್ಯಮಗಳ ಮುಂದೆ ಅದು ನನ್ನ ಸಹಿಯೇ ಅಲ್ಲ ಎಂದು ಹೇಳುತ್ತಿದ್ದೀರ. ಕುಮಾರಸ್ವಾಮಿ ಅವರೇ ಅದು ನಿಮ್ಮ ಸಹಿ ಅಲ್ಲವಾದರೆ, ಈಗಲಾದರೂ ಅದರ ಬಗ್ಗೆ ದೂರು ನೀಡಿ. ನೀವು ದೊಡ್ಡ ಸರ್ಕಾರದ ಭಾಗವಾಗಿದ್ದೀರಿ. ಆದರೂ ಯಾಕೆ ದೂರು ನೀಡುತ್ತಿಲ್ಲ?” ಎಂದು ತಿಳಿಸಿದರು.

ಪ್ರಶ್ನೋತ್ತರ:

ಕುಮಾರಸ್ವಾಮಿ ಅವರು ಈ ನಕಲಿ ಸಹಿ ಬಗ್ಗೆ ಯಾವುದೇ ತನಿಖೆ ನಡೆಸಲಿ ಎಂದು ಹೇಳಿರುವ ಬಗ್ಗೆ ಕೇಳಿದಾಗ, “ನಾವು ವಿಚಾರಣೆ ಮಾಡುವುದು ಬೇರೆ ವಿಚಾರ. ಆದರೆ ಅವರ ಸಹಿ ನಕಲು ಮಾಡಲಾಗಿದೆ ಎಂದು ಅವರೇ ಹೇಳುತ್ತಿದ್ದೀರಲ್ಲವೇ ಅವರು ಮೊದಲು ದೂರು ನೀಡಲಿ. ಅವರು ಮುಖ್ಯಮಂತ್ರಿಯಾಗಿದ್ದಾಗ ಹಾಕಲಾಗಿರುವುದು ಅವರ ಸಹಿ. ಹೀಗಾಗಿ ಅವರು ದೂರು ನೀಡಬೇಕು. ಈ ವಿಚಾರದಲ್ಲಿ ವಿಳಂಬವೇಕೆ? ಅವರು ಎಲ್ಲಿ ಬೇಕಾದರೂ ದೂರು ನೀಡಲಿ ಅಥವಾ ಆನ್ ಲೈನ್ ಮೂಲಕವಾದರೂ ದೂರು ನೀಡಲಿ. ನಾವು ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸುತ್ತೇವೆ. ಈ ಸಹಿಯಿಂದ ಅಮಾಯಕ ಕುಮಾರಸ್ವಾಮಿ ಅವರು ನ್ಯಾಯಾಲಯದ ಮೆಟ್ಟಿಲು ಏರಬೇಕಾಗಿಬಂದಿದೆ. ಅವರಿಗೆ ಕಿರುಕುಳವಾಗಿದೆ. ಇಂತಹ ಅಮಾಯಕ ಕುಮಾರಸ್ವಾಮಿ ವಿರುದ್ಧ 2011ರಲ್ಲಿ ಯಡಿಯೂರಪ್ಪ ಅವರ ಸರ್ಕಾರ ಯಾಕೆ ದೂರು ದಾಖಲಿಸಿತ್ತೊ. ಹೀಗಾಗಿ ಈ ಸಹಿ ಬಗ್ಗೆ ಅವರು ದೂರು ನೀಡಬೇಕು” ಎಂದು ಲೇವಡಿಯಾಗಿ ಪ್ರಶ್ನಿಸಿದರು.

ರಾಜ್ಯಪಾಲರ ಆದೇಶ ವಿರುದ್ಧ ಮುಖ್ಯಮಂತ್ರಿಗಳು ನ್ಯಾಯಾಲಯದ ಮೆಟ್ಟಿಲೇರಿರುವ, ಅವರಿಂದ ನ್ಯಾಯ ನಿರೀಕ್ಷಿಸಿ ಮತ್ತೆ ಮನವಿ ಸಲ್ಲಿಸುತ್ತಿದ್ದೀರ ಎಂದು ಕೇಳಿದಾಗ, “ತನ್ನಿಂದ ಅನ್ಯಾಯ ಆಗಬಾರದು ಎಂಬ ಬುದ್ಧಿಯನ್ನು ಭಗವಂತ ರಾಜ್ಯಪಾಲರಿಗೆ ಕರುಣಿಸಬಹುದು, ಆಮೂಲಕ ಅವರು ತಮ್ಮ ಆದೇಶವನ್ನು ಹಿಂಪಡೆಯಬಹುದು ಎಂದು ನಾವು ನಂಬಿದ್ದೇವೆ” ಎಂದು ತಿಳಿಸಿದರು.

ಜಿಂದಾಲ್ ಕಂಪನಿಗೆ ಕಡಿಮೆ ದರಕ್ಕೆ ಜಮೀನು ಹಾಗೂ ಖರ್ಗೆ ಅವರ ಪುತ್ರನಿಗೆ ಕೆಐಎಡಿಬಿ ಜಮೀನು ಮಂಜೂರಾತಿ ಬಗ್ಗೆ ಕೇಳಿದಾಗ, “ಸರ್ಕಾರದಲ್ಲಿ ನಾವು ಏನೇ ತೀರ್ಮಾನ ಮಾಡಿದರೂ ಸಾರ್ವಜನಿಕವಾಗಿ ಅವು ವಿಮರ್ಶೆಗೆ ಒಳಗಾಗಬೇಕು. ಅದು ಸಂತೋಷ. ಈ ವಿಚಾರವಾಗಿ ಮುಂದೆ ನಾವು ಉತ್ತರ ನೀಡುತ್ತೇವೆ. ಯಡಿಯೂರಪ್ಪ ಹಾಗೂ ಬೊಮ್ಮಾಯಿ ಅವರ ಕಾಲದಲ್ಲಿ ಎಷ್ಟು ಜಮೀನನ್ನು ಯಾವ ರೀತಿ ಎಷ್ಟು ಸಂಸ್ಥೆಗಳಿಗೆ ನೀಡಿದ್ದಾರೆ” ಎಂದರು.

“ಮಾಧ್ಯಮದವರು ಕೂಡ ಸಿಎ ನಿವೇಶನ ಬೇಕು, ಮಾಧ್ಯಮ ಸಂಸ್ಥೆಗಳಿಗೆ ಕಟ್ಟಡ ಬೇಕು ಎಂದು ಅನೇಕ ಅರ್ಜಿಗಳು ಬಂದಿವೆ. ಟ್ರಸ್ಟ್ ಎಂದರೆ ಸ್ವಂತಕ್ಕಾಗಿ ಅಲ್ಲ. ಅದು ಸಾರ್ವಜನಿಕ ಉದ್ದೇಶಕ್ಕಾಗಿ. ಈ ವಿಚಾರವಾಗಿ ನಮ್ಮ ಬೃಹತ್ ಕೈಗಾರಿಕಾ ಸಚಿವರು ಸ್ಪಷ್ಟ ಉತ್ತರ ನೀಡಿದ್ದಾರೆ. ನಿಮಗೆ ಅವರ ಉತ್ತರ ಸಾಲದು ಎಂದರೆ ಆ ಬಗ್ಗೆ ಅಧ್ಯಯನ ಮಾಡಿ ನಂತರ ನಾನು ಉತ್ತರ ನೀಡುತ್ತೇನೆ. ನಾನು ಬಿಡಿಎ ಸಚಿವನಾಗಿದ್ದು, ನನಗೂ ಅನೇಕ ಅರ್ಜಿಗಳು ಬಂದಿವೆ. ಈ ಸಂಬಂಧ ಸಮಿತಿ ರಚಿಸಿ ಯಾರಿಗೆ ನೀಡಬೇಕು ಎಂದು ತೀರ್ಮಾನಿಸಲಾಗುವುದು” ಎಂದು ತಿಳಿಸಿದರು.

ಮಾಧ್ಯಮಗೋಷ್ಠಿಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಜಿ.ಸಿ ಚಂದ್ರಶೇಖರ್, ವಕ್ತಾರರಾದ ಎಂ.ಲಕ್ಷ್ಮಣ್, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಸೌಮ್ಯಾ ರೆಡ್ಡಿ, ಚಲನಚಿತ್ರ ಅಕಾಡೆಮಿ ಅಧ್ಯಕ್ಷರಾದ ಸಾಧು ಕೋಕಿಲ, ಕೆಪಿಸಿಸಿ ಅಧ್ಯಕ್ಷರ ರಾಜಕೀಯ ಕಾರ್ಯದರ್ಶಿ ದೀಪಕ್ ತಿಮ್ಮಯ ಹಾಗೂ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ವಿಜಯ್ ಮುಳಗುಂದ, ರಾಮಚಂದ್ರಪ್ಪ ಅವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

Verified by MonsterInsights