ವಿಜಯಪುರ: ಬಬಲೇಶ್ವರ ತಾಲೂಕಿನ ಮಂಗಳೂರು ಗ್ರಾಮದ ರೈತರೊಬ್ಬರ ಜಮೀನಿನಲ್ಲಿ ಖಾಸಗಿ ವಿಮಾನವೊಂದು ಪತನಗೊಂಡಿದ್ದು ಭಾರಿ ಆತಂಕ ಸೃಷ್ಟಿಸಿದೆ. ‘ರೆಡ್ ಬರ್ಡ್’ ಸಂಸ್ಥೆಗೆ ಸೇರಿದ ಖಾಸಗಿ ಜೆಟ್ ವಿಮಾನ ಕೆಳಕ್ಕುರುಳಿದೆ. ವಿಮಾನವು ಕಲಬುರಗಿಯಿಂದ ಬೆಳಗಾವಿಗೆ ಪ್ರಯಾಣಿಸುತ್ತಿದ್ದ ವೇಳೆ ಈ ಅವಘಡ ಸಂಭವಿಸಿದೆ ಎಂದು ತಿಳಿದುಬಂದಿದೆ. ವಿಮಾನವು ತಾಂತ್ರಿಕ ದೋಷ ಅಥವಾ ಹಾರಾಟದ ಸಮಯದಲ್ಲಿ ಇಂಧನ ಖಾಲಿಯಾದ ಹಿನ್ನೆಲೆಯಲ್ಲಿ ಈ ದುರ್ಘಟನೆ ನಡೆದಿರಬಹುದು ಎಂದು ಅಂದಾಜಿಸಲಾಗಿದೆ.

ವಿಮಾನ ಪತನಗೊಂಡ ಶಬ್ದಕ್ಕೆ ಗ್ರಾಮಸ್ಥರು ಬೆಚ್ಚಿಬಿದ್ದಿದ್ದು, ಕೂಡಲೇ ಸ್ಥಳಕ್ಕೆ ಧಾವಿಸಿ ಗಾಯಾಳುಗಳ ರಕ್ಷಣೆಗೆ ನೆರವಾಗಿದ್ದಾರೆ. ವಿಮಾನದಲ್ಲಿದ್ದ ಇಬ್ಬರು ಪೈಲಟ್‌ಗಳಿಗೆ ತೀವ್ರ ಗಾಯಗಳಾಗಿದ್ದು, ತಕ್ಷಣವೇ ಅಂಬ್ಯುಲೆನ್ಸ್ ಮೂಲಕ ವಿಜಯಪುರ ಜಿಲ್ಲಾ ಆಸ್ಪತ್ರೆಗೆ ರವಾನಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಪೈಲಟ್‌ಗಳ ಜೀವಕ್ಕೆ ಸದ್ಯ ಯಾವುದೇ ಅಪಾಯವಿಲ್ಲ ಎಂದು ವೈದ್ಯಕೀಯ ಮೂಲಗಳು ತಿಳಿಸಿವೆ. ವಿಮಾನವು ಜಮೀನಿಗೆ ಅಪ್ಪಳಿಸಿದ ರಭಸಕ್ಕೆ ಜಖಂಗೊಂಡಿದ್ದು, ಅದೃಷ್ಟವಶಾತ್ ಪ್ರಾಣಾಪಾಯ ಸಂಭವಿಸಿಲ್ಲ.

ಘಟನಾ ಸ್ಥಳಕ್ಕೆ ಬಬಲೇಶ್ವರ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದು, ತಾಂತ್ರಿಕ ತಜ್ಞರ ತಂಡವು ಸ್ಥಳಕ್ಕೆ ಆಗಮಿಸಿ ತನಿಖೆ ಆರಂಭಿಸಿದೆ. ವಿಮಾನ ಪತನಕ್ಕೆ ನಿಖರ ಕಾರಣವೇನು ಎಂಬುದು ತನಿಖೆಯ ಬಳಿಕವಷ್ಟೇ ಅಧಿಕೃತವಾಗಿ ತಿಳಿದುಬರಬೇಕಿದೆ.


