ಮೈಸೂರು : ಹೊಸ ವರ್ಷಾಚರಣೆಗೆ ಮೈಸೂರಿನ ಯೋಗಾನರಸಿಂಹಸ್ವಾಮಿ ದೇಗುಲದಲ್ಲಿ ಭಕ್ತರಿಗೆ 2 ಲಕ್ಷ ಲಡ್ಡು ವಿತರಣೆಗೆ ಸಿದ್ಧತೆ ಮಾಡುತ್ತಿದ್ದಾರೆ.
ದೇವಸ್ಥಾನದ ಅಧಿಕಾರಿಗಳು ತಲಾ 150 ಗ್ರಾಂ ತೂಕದ ಎರಡು ಲಕ್ಷ ಲಡ್ಡೂಗಳನ್ನು ಸಿದ್ಧಪಡಿಸುತ್ತಿದ್ದಾರೆ.
ಮೈಸೂರಿನ ವಿಜಯನಗರದಲ್ಲಿರುವ ಯೋಗಾನರಸಿಂಹಸ್ವಾಮಿ ದೇವಾಲಯದಲ್ಲಿ ಉಚಿತವಾಗಿ ಭಕ್ತರಿಗೆ ಲಡ್ಡು ವಿತರಿಸಲು ಸಿದ್ದತೆ ಮಾಡಿಕೊಳ್ಳುತ್ತಿದ್ದಾರೆ. ಇದು ಮಾತ್ರವಲ್ಲದೆ, ಎರಡು ಕೆಜಿ ತೂಕದ 15,000 ಲಡ್ಡೂಗಳನ್ನು ಉಚಿತವಾಗಿ ವಿತರಿಸಲು ತಯಾರಿ ನಡೆಸಲಾಗುತ್ತಿದೆ. ಇದಕ್ಕಾಗಿ 60 ಪರಿಣಿತ ಅಡುಗೆಯವರು ಡಿಸೆಂಬರ್ 20 ರಿಂದ ಕಾರ್ಯರ್ನಿವಹಿಸುತ್ತಿದ್ದಾರೆ.
ಹೊಸ ವರ್ಷಾಚರಣೆಯಂದು ದೇವಸ್ಥಾನಕ್ಕೆ ಆಗಮಿಸುವ ಭಕ್ತರಿಗೆ ಲಡ್ಡೂಗಳನ್ನು ವಿತರಿಸಲಾಗುವುದು. ಇದಕ್ಕಾಗಿ ಸುಮಾರು 2 ಲಕ್ಷ ಲಡ್ಡೂ ತಯಾರಿಸಲಾಗುತ್ತದೆ ಎಂದು ದೇವಾಲಯದ ಸಂಸ್ಥಾಪಕ ಬಾಷ್ಯಂ ಸ್ವಾಮಿ ತಿಳಿಸಿದ್ದಾರೆ. 1994 ರಿಂದ ದೇವಸ್ಥಾನದಲ್ಲಿ ಹೊಸ ವರ್ಷದಂದು ಲಡ್ಡುಗಳನ್ನು ವಿತರಿಸಲಾಗುತ್ತಿದೆ. ಅದೇ ರೀತಿ ಈ ವರ್ಷವೂ ಎರಡು ಲಕ್ಷಕ್ಕೂ ಹೆಚ್ಚು ಭಕ್ತರಿಗೆ ಲಡ್ಡೂಗಳನ್ನು ವಿತರಿಸಲಾಗುವುದು ಎಂದು ತಿಳಿಸಿದರು.
ಜನವರಿ 1 ರಂದು ಬೆಳಿಗ್ಗೆ 4 ಗಂಟೆಯಿಂದ ಪ್ರಾರಂಭವಾಗುವ ಲಡ್ಡೂಗಳ ವಿತರಣೆ ಕಾರ್ಯ ಮಧ್ಯರಾತ್ರಿ 12 ರವರೆಗೆ ನಡೆಯಲಿದೆ ಎಂದರು. ಹೂವಿನ ಅಲಂಕಾರವು ದೇವಾಲಯದ ಪ್ರಮುಖ ಆಕರ್ಷಣೆಗಳಲ್ಲಿ ಒಂದಾಗಿದೆ. ಹೀಗಾಗಿ ಯೋಗಾನರಸಿಂಹ ಸ್ವಾಮಿಗೆ ಸಹಸ್ರನಾಮ ಪೂಜೆ ಮಾಡಲು ತಮಿಳುನಾಡಿನ ಮಧುರೈನಿಂದ ವಿಶೇಷ ‘ತೋವಲೆ’ ಮತ್ತು ‘ಸ್ವರ್ಣ ಪುಷ್ಪ’ ಪುಷ್ಪಗಳನ್ನು ತರಲಾಗುವುದು. ಆವರಣದಲ್ಲಿರುವ ಮಹಾಲಕ್ಷ್ಮಿ ಮತ್ತು ಪದ್ಮಾವತಿ ದೇವಸ್ಥಾನದಲ್ಲಿಯೂ ಏಕಾದಶ ಪ್ರಕೋರತೋತ್ಸವದ ಪೂಜೆಗಳು ನಡೆಯಲಿವೆ ಎಂದು ಅವರು ಮಾಹಿತಿ ನೀಡಿದರು.