
ಉತ್ತರ ಕನ್ನಡ: ಸಿದ್ದಾಪುರದಲ್ಲಿ ನಡೆದ ವಸಂತ್ ನಾಯ್ಕ್ ಕೊಲೆ ಪ್ರಕರಣದ ಪ್ರಮುಖ ಆರೋಪಿ ಸುಚಿತ್ರಾ ಅಲಿಯಾಸ್ ಸುರೇಖಾಳ ನವನವೀನ ವೇಷಗಳು ಮತ್ತು ಆಕೆ ಯುವಕರನ್ನು ಬಲೆಗೆ ಬೀಳಿಸುತ್ತಿದ್ದ ಮಾಸ್ಟರ್ ಪ್ಲಾನ್‌ಗಳು ಈಗ ಪೊಲೀಸ್ ತನಿಖೆಯಲ್ಲಿ ಬಯಲಾಗುತ್ತಿವೆ. ಸಾಮಾಜಿಕ ಜಾಲತಾಣಗಳಲ್ಲಿ ‘ರೀಲ್ಸ್ ರಾಣಿ’ ಎಂದೇ ಖ್ಯಾತಿಯಾಗಿದ್ದ ಈಕೆಯ ಅಸಲಿ ಮುಖ ನೋಡಿ ಸ್ವತಃ ಪೊಲೀಸರೇ ದಂಗಾಗಿದ್ದಾರೆ.
ತನಿಖೆಯ ವೇಳೆ ಲಭ್ಯವಾಗಿರುವ ಮಾಹಿತಿಯ ಪ್ರಕಾರ, ಸುಚಿತ್ರಾಳ ಅಸಲಿ ಹೆಸರು ಸುರೇಖಾ. ವಿವಾಹಿತೆಯಾಗಿದ್ದರೂ ಮತ್ತು ಇಬ್ಬರು ಮಕ್ಕಳಿದ್ದರೂ ಸಹ, ಹ್ಯಾಂಡ್‌ಸಮ್ ಯುವಕರನ್ನು ಆಕರ್ಷಿಸಲು ಆಕೆ ತನ್ನ ಹೆಸರನ್ನೇ ಬದಲಿಸಿಕೊಂಡಿದ್ದಳು. ತನ್ನ ಮದುವೆ ಫೋಟೋಗಳನ್ನು ಯಾರಾದರೂ ನೋಡಿದರೆ, “ಅದು ನಾನಲ್ಲ, ನನ್ನ ಅವಳಿ ಸಹೋದರಿ ಸುರೇಖಾ, ಆಕೆ ಈಗ ಮೃತಪಟ್ಟಿದ್ದಾಳೆ, ಹಾಗಾಗಿ ಆಕೆಯ ಮಕ್ಕಳನ್ನು ನಾನೇ ನೋಡಿಕೊಳ್ಳುತ್ತಿದ್ದೇನೆ” ಎಂದು ಸುಳ್ಳು ಹೇಳಿ ಪಡ್ಡೆ ಹುಡುಗರನ್ನು ನಂಬಿಸುತ್ತಿದ್ದಳು.
ಇನ್ಸ್ಟಾಗ್ರಾಮ್ ಮತ್ತು ಫೇಸ್‌ಬುಕ್‌ನಲ್ಲಿ ಸಕ್ರಿಯವಾಗಿದ್ದ ಸುಚಿತ್ರಾ, ಅಲ್ಲಿನ ಸುಂದರ ಯುವಕರ ಫೋಟೋಗಳಿಗೆ ಕಮೆಂಟ್ ಮಾಡುವ ಮೂಲಕ ಪರಿಚಯ ಬೆಳೆಸಿಕೊಳ್ಳುತ್ತಿದ್ದಳು. ನಂತರ ಮೆಸೆಂಜರ್‌ನಲ್ಲಿ ಚಾಟಿಂಗ್ ಆರಂಭಿಸಿ, ಎರಡು-ಮೂರು ತಿಂಗಳ ಕಾಲ ನಂಬಿಕೆ ಹುಟ್ಟಿಸಿ ಅವರ ಆರ್ಥಿಕ ಪರಿಸ್ಥಿತಿಯ ಬಗ್ಗೆ ಮಾಹಿತಿ ಕಲೆಹಾಕುತ್ತಿದ್ದಳು. ಆನಂತರ “ನನಗೆ ಮದುವೆಯಾಗಲು ಒಳ್ಳೆ ಹುಡುಗ ಸಿಗುತ್ತಿಲ್ಲ” ಎಂದು ಭಾವನಾತ್ಮಕವಾಗಿ ಗಾಳ ಹಾಕಿ ಅವರಿಂದ ಹಣ ಲಪಟಾಯಿಸುತ್ತಿದ್ದಳು.
ಈಗಾಗಲೇ ಜ್ಯೋತಿಷಿ ಕಮಲಾಕರ್ ಭಟ್ ಜೊತೆಗಿನ ಅಕ್ರಮ ಸಂಬಂಧ ಮತ್ತು ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ಸುಚಿತ್ರಾಳ ಈ ನವರಂಗಿ ಆಟಗಳಿಂದ ಹಲವರು ಸಂಸಾರ ಕಳೆದುಕೊಂಡು ಬೀದಿಗೆ ಬಿದ್ದಿದ್ದಾರೆ. “ಮನೆ-ಮಠ ಬಿಟ್ಟು ಹೋದ ಈಕೆಗೆ ಕಠಿಣ ಶಿಕ್ಷೆಯಾಗಬೇಕು” ಎಂದು ಈಕೆಯ ಪತಿ ಮಹೇಶ್ ನಾಯ್ಕ್ ಕುಟುಂಬಸ್ಥರು ಆಗ್ರಹಿಸಿದ್ದಾರೆ. ಸುಚಿತ್ರಾಳ ಮೊಬೈಲ್ ಫೋನ್ ಪರಿಶೀಲಿಸುತ್ತಿರುವ ಪೊಲೀಸರಿಗೆ ಈಕೆಯ ಬಾಹುವಿಗೆ ಸಿಲುಕಿದ ಇನ್ನು ಅನೇಕ ಯುವಕರ ರಹಸ್ಯಗಳು ಸಿಗುವ ಸಾಧ್ಯತೆಯಿದೆ.




